ಇಂಗ್ಲೆಂಡ್ ನ 38 ವರ್ಷದ ಮಹಿಳೆಯೊಬ್ಬಳು ದಿನದ 24 ಗಂಟೆಗಳಲ್ಲಿ 22 ಗಂಟೆಗಳನ್ನು ಮಲಗಿ ಕಳೆಯುತ್ತಾಳಂತೆ. ಇಷ್ಟೊಂದು ಸಮಯದ ನಿದ್ದೆಯಿಂದಾಗಿ ಆಕೆಯನ್ನು ‘ಸ್ಲೀಪಿಂಗ್ ಬ್ಯೂಟಿ’ ಎಂದೇ ಕರೆಯುತ್ತಾರಂತೆ. ನಿತ್ಯವೂ 22 ಗಂಟೆಗಳ ಕಾಲ ನಿದ್ದೆ ಮಾಡುವಂತಹ ಅಸಾಮಾನ್ಯ ಸಾಮರ್ಥ್ಯವನ್ನು ಮಹಿಳೆ ಹೊಂದಲು ಆಕೆ ಬಳಲುತ್ತಿರುವ ರೋಗವೇ ಕಾರಣವೆಂದು ವೈದ್ಯ ಲೋಕ ತಿಳಿಸಿದೆ.
ದಿನದ 24 ಗಂಟೆಗಳಲ್ಲಿ ಎಂಟು ತಾಸುಗಳ ಕಾಲ ನಿದ್ದೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಹಿತಕರ ಎಂಬುದಾಗಿ ವೈದ್ಯರು ಹೇಳುತ್ತಾರೆ. ಪ್ರತಿನಿತ್ಯವೂ ಸರಿಯಾದ ನಿದ್ದೆ ಮಾಡುವುದು ಮಾನಸಿಕ ಹಾಗೂ ದೈಹಿಕ ಆರೋಗ್ಯದ ಸುಸ್ಥಿರತೆಗೆ ಕಾರಣವಾಗುತ್ತದೆ. ಆದರೆ ಈಗಿನ ಒತ್ತಡ ಪೂರ್ಣ ಜೀವನದಲ್ಲಿ ಮನೆ ಕೆಲಸ, ಉದ್ಯೋಗ, ಸಾಮಾಜಿಕ ಜಾಲತಾಣ ಎನ್ನುತ್ತಾ ಅನೇಕರು ಸರಿಯಾದ ಸಮಯದಲ್ಲಿ ನಿದ್ದೆ ಮಾಡುವುದನ್ನು ಬಿಟ್ಟಿರುತ್ತಾರೆ.
ಸಾಕಷ್ಟು ಪ್ರಮಾಣದ ನಿದ್ದೆಯನ್ನು ಕೂಡ ಮಾಡುವುದಿಲ್ಲ. ಇನ್ನೂ ಕೆಲವರು ಸೋಮಾರಿಗಳಂತೆ ದಿನದಲ್ಲಿ ಹಲವು ತಾಸುಗಳನ್ನು ಮಲಗಿಯೇ ಕಳೆಯುತ್ತಾರೆ. ಆದರೆ ಈ ಮಹಿಳೆಯ ಕಥೆಯೇ ಬೇರೆ. ಇಂಗ್ಲೆಂಡ್ ನ ವೆಸ್ಟ್ ಕ್ಯಾಸೆಲ್ ಪೋರ್ಡ್ ನಲ್ಲಿ ವಾಸಿಸುತ್ತಿರುವ ಜೋವನ್ನಾ ಕಾಕ್ಸ್ ಎಂಬ ಹೆಸರಿನ ಮಹಿಳೆಯು ನಿದ್ದೆ ಮಾಡುವ ಸಮಯದಿಂದಾಗಿ ಜನಪ್ರಿಯತೆಯನ್ನು ಹೊಂದಿದ್ದಾರೆ.
ಅಸಲಿಗೆ ಆಕೆ ಒಂದು ಕಾಯಿಲೆಯಿಂದ ಬಳಲುತ್ತಿದ್ದಾರೆ. ಅಂತಹ ಕಾಯಿಲೆ ಯಾವುದು ಎಂದು ಯೋಚಿಸುತ್ತಿದ್ದೀರಾ? ಆ ಕಾಯಿಲೆಯ ಹೆಸರು ʼಇಡಿಯೋಪಥಿಕ್ ಹೈಪರ್ಸೋಮ್ನಿಯಾʼ. ಈ ಕಾಯಿಲೆಯನ್ನು ಹೊಂದಿದವರು ಹೆಚ್ಚೆಚ್ಚು ನಿದ್ದೆ ಮಾಡಲು ಬಯಸುತ್ತಾರೆ. ಹಗಲಿನಲ್ಲಿಯೂ ನಿದ್ದೆಯ ಗುಂಗಿನಲ್ಲಿಯೇ ಇರುತ್ತಾರೆ. ಒಮ್ಮೆ ನಿದ್ದೆ ಮಾಡಲು ಪ್ರಾರಂಭಿಸಿದರೆ ಎಚ್ಚರಗೊಳ್ಳುವುದು ಕಷ್ಟಕರವಾಗಿರುತ್ತದೆ.
ಇಂತಹ ವ್ಯಕ್ತಿಗಳು ಕೆಲವೊಮ್ಮೆ ಕಾಯಿಲೆಯೂ ಇರುವ ಬಗ್ಗೆ ಅರಿಯದೆ ತಮ್ಮ ಸುತ್ತಮುತ್ತಲ ಜನರಿಂದ ಅಪಹಾಸ್ಯಕ್ಕೆ ಒಳಗಾಗುವ ಪರಿಸ್ಥಿತಿಯನ್ನು ಎದುರಿಸುತ್ತಾ ಇರುತ್ತಾರೆ. ಕೆಲವರು ನಿದ್ದೆ ಮಾಡಿದರೆ ಎಚ್ಚರವಾಗುವುದಿಲ್ಲ..ಪದೇಪದೇ ನಿದ್ದೆ ಬರುತ್ತಲೇ ಇರುತ್ತದೆ…ಮನೆ ಕೆಲಸವನ್ನು ಮಾಡುವಲ್ಲಿ, ಪ್ರಯಾಣದಲ್ಲಿ, ಉದ್ಯೋಗ ಸ್ಥಳಗಳಲ್ಲಿ ನಿದ್ದೆಯು ಅತಿಯಾಗಿ ಬರುವುದರಿಂದ ಸಮಸ್ಯೆ ಆಗುತ್ತಿದೆ ಎಂದು ನೋವನ್ನು ಅನುಭವಿಸುತ್ತಾ ಇರುತ್ತಾರೆ.
ನಾಲ್ಕು ದಿನಗಳ ಕಾಲ ಸತತವಾಗಿ ನಿದ್ದೆ ಮಾಡುತ್ತಾ ಎದ್ದೇಳದೆ ಇದ್ದ ಮಹಿಳೆ : ಜೋವನ್ನಾ ಕಾಕ್ಸ್ ಮಹಿಳೆಗೆ 2021 ರಲ್ಲಿ ತನಗೆ ಈ ರೀತಿಯಾಗಿ ನಿದ್ದೆ ಮಾಡುವ ಕಾಯಿಲೆಯೊಂದು ಅಂಟಿದೆ ಎಂಬುದು ತಿಳಿದಿದೆ. ‘Sleeping beauty’ ಜೋವನ್ನಾ ತನಗೆ ಇರುವ ಕಾಯಿಲೆಯ ಬಗ್ಗೆ ಹೇಳಿಕೊಂಡಿದ್ದಾರೆ. ತಮ್ಮ ಬೇಸರವನ್ನು ತೋಡಿಕೊಂಡಿದ್ದಾರೆ.
“ಒಮ್ಮೆ ಮಲಗಿದ ಮೇಲೆ ನನ್ನನ್ನು ಎಚ್ಚರಗೊಳಿಸಲು ಸಾಧ್ಯವೇ ಇಲ್ಲ. ನನಗೆ ನಾನು ಎಷ್ಟು ಸಮಯದಿಂದ ನಿದ್ದೆ ಹೋಗಿರುವೆ ಎಂಬುದೇ ತಿಳಿಯುವುದಿಲ್ಲ. ಒಮ್ಮೊಮ್ಮೆ ನಿದ್ದೆ ಮಾಡಿದಾಗ ಎಚ್ಚರವಾಗದೆ ಸತತವಾಗಿ ನಾಲ್ಕು ದಿನಗಳ ಕಾಲ ಎದ್ದೇಳದೆ ಇರುವುದು ಇದೆ. ಈ ರೀತಿಯ ಅತಿಯಾದ ನಿದ್ದೆಯಿಂದಾಗಿ ನನ್ನ ಜೀವನವೇ ಹಾಳಾಗುತ್ತಿದೆ. ಈ ರೋಗದಿಂದ ನಾನು ಅನುಭವಿಸುತ್ತಿರುವ ನೋವು ಅಷ್ಟಿಷ್ಟಲ್ಲ” ಎಂದು ಜೋವನ್ನಾ ಹೇಳಿದ್ದಾರೆ.
ಹೆಚ್ಚಿನ ಸಮಯ ನಿದ್ದೆಯಿಂದಲೇ ಕಳೆಯುವ ಇಂಗ್ಲೆಂಡ್ ನ ಈ ಮಹಿಳೆಯು ತಮ್ಮ ಆಹಾರ ಪದ್ಧತಿಯಿಂದಲೇ ಬದುಕುಳಿದಿದ್ದಾರೆ. ಊಟವಿಲ್ಲದೆ, ದೈಹಿಕ ಚಲನೆ ಇಲ್ಲದೆ ದೇಹವು ಅಗತ್ಯ ಪೋಷಕಾಂಶಗಳ ಪೂರೈಕೆಯಾಗದೆ ಬಳಲಬಹುದು. ದೇಹಕ್ಕೆ ಅವಶ್ಯಕ ವಸ್ತುಗಳ ಕೊರತೆಯಾಗಬಹುದು. ಅದಕ್ಕಾಗಿ ಈ ಮಹಿಳೆ ಪ್ರೋಟೀನ್ ಶೇಕ್ ಮತ್ತು ಪೋಷಕಾಂಶ ಯುಕ್ತ ಆಹಾರಗಳನ್ನು ಸೇವಿಸುತ್ತಾಳಂತೆ.