ಕೇಂದ್ರ ಸರ್ಕಾರ ರೈತರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಕೃಷಿಗಾಗಿ ಮತ್ತು ಕೃಷಿ ಯಂತ್ರೋಪಕರಣಗಳ ಖರೀದಿಗಾಗಿ ಸಬ್ಸಿಡಿ ಸಾಲಗಳು, ಸಹಾಯಧನ, ಬೆಳೆ ವಿಮೆ ಇನ್ನು ಮುಂತಾದ ಯೋಜನೆಗಳ ಜೊತೆಗೆ ಈಗ ರೈತನಿಗೆ ಉಚಿತವಾಗಿ ನೀರಾವರಿ ಪೈಪ್ ಲೈನ್ ಕೂಡ ಒದಸಿ ಕೊಡುವ ಉದ್ದೇಶದಿಂದ ನೀರಾವರಿ ಪೈಪ್ ಲೈನ್ ಯೋಜನೆ 2023 ಎನ್ನುವ ಹೊಸ ಯೋಜನೆಯನ್ನು ಜಾರಿಗೆ ತಂದಿದೆ.
ಈ ಯೋಜನೆಗಳಿಗೆ ಅರ್ಜಿ ಸಲ್ಲಿಸುವ ಮೂಲಕ ಕನಿಷ್ಠ 15,000 ದಿಂದ ಘಟಕ ವೆಚ್ಚದ ಶೇಕಡವಾರು 60% ವರೆಗೂ ಕೂಡ ಸಹಾಯಧನವನ್ನು ಪಡೆಯಬಹುದು. ಈ ಯೋಜನೆಗೆ ಅರ್ಜಿ ಸಲ್ಲಿಸಲು ರೈತರು ಏನೆಲ್ಲಾ ದಾಖಲೆಗಳನ್ನು ಹೊಂದಿರಬೇಕು ಇರಬೇಕಾದ ಅರ್ಹತೆಗಳೇನು? ನಿಯಮಗಳೇನು ಮತ್ತು ಅರ್ಜಿ ಸಲ್ಲಿಸುವ ವಿಧಾನ ಹೇಗೆ ಎನ್ನುವ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಿ ಕೊಡುತ್ತಿದ್ದೇವೆ.
ನೀರಾವರಿ ಪೈಪ್ ಲೈನ್ ಯೋಜನೆ ಉದ್ದೇಶ:-
● ಹೊಲ, ಜಮೀನುಗಳಲ್ಲಿ ನೀರಾವರಿ ಸೌಲಭ್ಯವನ್ನು ಹೆಚ್ಚಿಸಬಹುದು.
● ಪೈಪ್ ಲೈನ್ ಮೂಲಕ ನೀರಿನ ಸರಬರಾಜು ನಿಯಮಿತವಾಗಿರುವುದರಿಂದ ಅನಾವಶ್ಯಕವಾಗಿ ನೀರು ಪೋಲಾಗುವುದನ್ನು ತಡೆಗಟ್ಟಬಹುದು.
● ಖಾರಿಫ್ ಮತ್ತು ರಾಬಿ ಸೀಸನ್ ನ ಬೆಳೆಗಳನ್ನು ಬೆಳೆದು ರೈತರು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು.
● ನೀರಾವರಿ ಪೈಪ್ ಲೈನ್ ಯೋಜನೆಯಡಿ ಸರ್ಕಾರ ನೀಡುತ್ತಿರುವ ಸಹಾಯಧನವನ್ನು ಸದುಪಯೋಗಪಡಿಸಿಕೊಂಡರೆ ರೈತನ ಆರ್ಥಿಕ ಹೊರೆ ಕೂಡ ಕಡಿಮೆ ಆಗುತ್ತದೆ.
ನೀರಾವರಿ ಪೈಪ್ ಲೈನ್ ಯೋಜನೆಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು:-
● ಅರ್ಜಿ ಸಲ್ಲಿಸುವ ರೈತನ ಹೆಸರಿನಲ್ಲಿ ಸ್ವಂತ ಹೊಲ ಅಥವಾ ಜಮೀನು ಇರಬೇಕು, ಆತನು ಕೃಷಿಯಲ್ಲಿ ತೊಡಗಿಕೊಂಡಿರಬೇಕು.
● ಜಮೀನಿನಲ್ಲಿನ ಬಾವಿಯ ಮೇಲೆ ವಿದ್ಯುತ್ ಅಥವಾ ಡೀಸೆಲ್ ಅಥವಾ ಟ್ರ್ಯಾಕ್ಟರ್ ಚಾಲಿತ ಪಂಪ್ ಇರಬೇಕು, ಇದು ಕಡ್ಡಾಯ.
● ರೈತರ ಜಮೀನಿನಲ್ಲಿ ಪಾಲುದಾರಿಕೆ ಇದ್ದರೆ, ಎಲ್ಲಾ ಪಾಲುದಾರರಿಗೆ ಪ್ರತ್ಯೇಕವಾಗಿ ಪೈಪ್‌ಲೈನ್ ಸಬ್ಸಿಡಿ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ಆದರೆ ಎಲ್ಲಾ ರೈತನ ಜಮೀನಿಗೂ ಪೈಪ್ ಲೈನ್ ತೆಗೆದುಕೊಂಡು ಹೋಗಲು ಜಾಗವಿರಬೇಕು.
● ರೈತರ ಹೆಸರಿನಲ್ಲಿ ನೀರಿನ ಮೂಲವಿಲ್ಲದಿದ್ದರೆ ನೀರಿನ ಅನುಕೂಲ ನೀಡುವ ರೈತನಿಂದ ಒಪ್ಪಂದದ ಮಾದರಿಯಲ್ಲಿ ಕಾಗದದ ಮೇಲೆ ಲಿಖಿತ ಪುರಾವೆಯನ್ನು ರೈತರು ಮಾಡಿಕೊಳ್ಳಬೇಕಾಗುತ್ತದೆ.
● ಅರ್ಜಿ ಸಲ್ಲಿಸುವ ರೈತರ ಮೊಬೈಲ್ ಸಂಖ್ಯೆಯನ್ನು ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಯೊಂದಿಗೆ ಜೋಡಿಸಬೇಕು.
ನೀರಾವರಿ ಸಬ್ಸಿಡಿ ಯೋಜನೆಯಲ್ಲಿ ಸಿಗುವ ಸಹಾಯಧನ:-
● ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಕನಿಷ್ಠ 18,000 ರೂ.ಗೆ ಒಳಪಟ್ಟು ಘಟಕ ವೆಚ್ಚದ 60% ಪ್ರತಿಶತದಷ್ಟು ಸಹಾಯಧನವನ್ನು ನೀಡಲಾಗುತ್ತದೆ.
● ಇತರೆ ರೈತರಿಗೆ ಕನಿಷ್ಠ 15,000 ರೂ.ಗೆ ಒಳಪಟ್ಟು ಘಟಕ ವೆಚ್ಚದ 50% ಸಹಾಯಧನವನ್ನು ನೀಡಲಾಗುತ್ತದೆ.
ನೀರಾವರಿ ಸಬ್ಸಿಡಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ:-
● ಮೊದಲಿಗೆ ರೈತರುಗಳು ಎಲ್ಲಾ ಪೂರಕ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಬೇಕು.
● ನಂತರ ತಮ್ಮ ಹತ್ತಿರದಲ್ಲಿರುವ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿಕೊಟ್ಟು ನೀರಾವರಿ ಸಬ್ಸಿಡಿ ಯೋಜನೆಗೆ ಅರ್ಜಿ ಸಲ್ಲಿಸುವ ಕುರಿತು ಮಾಹಿತಿ ಪಡೆದುಕೊಳ್ಳಬೇಕು.
● ಬಳಿಕ ರೈತ ಸಂಪರ್ಕ ಕೇಂದ್ರದಲ್ಲಿ ಅರ್ಜಿ ಪಡೆದು ಭರ್ತಿ ಮಾಡಿ ಪೂರಕ ದಾಖಲೆಗಳನ್ನು ಲಗತ್ತಿಸಿ ಅರ್ಜಿ ಸಲ್ಲಿಸಬೇಕು.
● ನಿಮ್ಮ ಅರ್ಜಿಯ ಪರಿಶೀಲನೆ ನಡೆದು ಅನುಮೋದನೆ ಆದ ಬಳಿಕ ಸಹಾಯಧನವು ನಿಮ್ಮ ಬ್ಯಾಂಕ್ ಖಾತೆಗೆ DBT ಮೂಲಕ ವರ್ಗಾವಣೆ ಆಗುತ್ತದೆ.