ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಈ ಹೆಸರು ಕೇಳುತ್ತಿದ್ದಂತೆ ಹಿಂದೆಲ್ಲಾ ನಗುಮುಖದಿಂದ ಕೂಡಿದ ರಾಜಕುಮಾರನ ನೆನಪಾಗುತ್ತಿತ್ತು. ಆದರೆ ಈಗ ಈ ಸದ್ದು ಕಿವಿಗೆ ಬೀಳುತ್ತಿದ್ದಂತೆ ಅಪ್ಪು ಇಲ್ಲದ ನೋವಿನಿಂದ ಎಲ್ಲರ ಮುಖ ಬಾಡಿ ಹೋಗುತ್ತದೆ. ಅವರು ಇಂದು ದೈಹಿಕವಾಗಿ ನಮ್ಮೊಂದಿಗೆ ಇರದೆ ಇರಬಹುದು ಆದರೆ ಜೊತೆಗಿರದ ಜೀವ ಕೊನೆಯವರೆಗೂ ಜೀವಂತ ಎನ್ನುವ ಅವರದ್ದೇ ಸಿನಿಮಾದ ಸಾಲಿನಂತೆ ಕರ್ನಾಟಕದ ಪ್ರತಿಯೊಬ್ಬರ ಮನಸಿನಲ್ಲೂ ಅಪ್ಪು ಅವರ ನೆನಪು ಶಾಶ್ವತವಾಗಿ ಉಳಿದಿದೆ.
ಒಂದು ವರ್ಷದಿಂದ ಪ್ರತಿನಿತ್ಯ ಒಂದಲ್ಲ ಒಂದು ವಿಷಯಕ್ಕೆ ದಿನಕ್ಕೊಮ್ಮೆ ಆದರೂ ಜನ ಅಪ್ಪು ಅನ್ನು ನೆನೆಯುತ್ತಿದ್ದಾರೆ. ಈಗ ಯಾವುದೇ ಊರಿನ ಹಬ್ಬವಾದರೂ ಅಲ್ಲಿ ಅಪ್ಪು ಫೋಟೋ ಇರುತ್ತದೆ, ಪ್ರತಿ ರೋಡಿನಲ್ಲೂ ಅಪ್ಪು ನಗುಮುಖದಿಂದ ಕೂಡಿದ ಪೋಸ್ಟರ್ ಇರುತ್ತದೆ, ಊರಿನ ಮುಖ್ಯ ರಸ್ತೆಯನ್ನು ಪುನೀತ್ ರಾಜಕುಮಾರ್ ರಸ್ತೆ ಎಂದು ಕರೆಯಲಾಗುತ್ತಿದೆ.
ಇಷ್ಟರ ಮಟ್ಟಿಗೆ ಕರ್ನಾಟಕದ ಜನರಿಂದ ಪ್ರೀತಿ ಗಳಿಸಿರುವ ಅಪ್ಪು ತಾನು ಮಾಡುತ್ತಿದ್ದ ಸಮಾಜ ಸೇವೆ, ಸಿನಿಮಾಗೆ ಸಂಬಂಧಪಟ್ಟ ಜವಾಬ್ದಾರಿ ಇದೆಲ್ಲವನ್ನು ಪತ್ನಿಯ ಹೆಗಲಿಗೆ ಹೊರಿಸಿ ಅಪ್ಪ-ಅಮ್ಮನ ಮಡಿಲಿನಲ್ಲಿ ಮೌನವಾಗಿ ಲೀನವಾಗಿದ್ದಾರೆ. ಇದೀಗ ಅಪ್ಪು ಅವರ ಎಲ್ಲಾ ಕನಸುಗಳನ್ನು ನನಸು ಮಾಡುವ ನಿರ್ಧಾರ ಮಾಡಿರುವ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಅಪ್ಪು ಅವರಂತೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಜನಸಾಮಾನ್ಯರ ಕಷ್ಟ ಸುಖ ಆಲಿಸಿ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ. ಪುನೀತ್ ರಾಜಕುಮಾರ್ ಅವರು ಆಸೆಯಿಂದ ನಿರ್ಮಿಸಿದ್ದ ಪಿಆರ್ ಕೆ ಪ್ರೊಡಕ್ಷನ್ ಅನ್ನು ಮುನ್ನಡೆಸಿಕೊಂಡು ಹೋಗುತ್ತಿರುವ ಅಶ್ವಿನಿ ಅವರು ಆ ಮೂಲಕ ಅಪ್ಪು ಅವರು ಅಂದುಕೊಂಡಿದ್ದ ಹಾಗೆ ಹೊಸ ಪ್ರತಿಭೆಗಳನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದ್ದಾರೆ.
ಹಿಂದೆಲ್ಲ ಅಪ್ಪು ಇರುವ ತನಕ ಅಪ್ಪು ಜೊತೆಗೆ ಎಲ್ಲಾ ಕಾರ್ಯಕ್ರಮಕ್ಕೂ ಹೋಗುತ್ತಿದ್ದರೂ ಎಂದು ಕ್ಯಾಮರಾ ಮುಂದೆ ಮಾತನಾಡದೇ ನಾಚಿಕೆಯಿಂದ ಅಪ್ಪು ಹಿಂದೆ ನಿಲ್ಲುತ್ತಿದ್ದ ಅಶ್ವಿನಿ ಅವರು ಇದೀಗ ದೊಡ್ಡ ಮನೆಯ ಸೊಸೆಯಾಗಿ ತನ್ನೆಲ್ಲ ನೋವನ್ನು ನುಂಗಿಕೊಂಡು ಗಟ್ಟಿಗಿತ್ತಿಯಂತೆ ಅಪ್ಪು ಹೆಸರು ಉಳಿಸುವ ಕೆಲಸಕ್ಕೆ ಪಣತೊಟ್ಟಿದ್ದಾರೆ. ಅದಕ್ಕಾಗಿ ಯಾವುದೇ ಕಾರ್ಯಕ್ರಮದ ಆಹ್ವಾನ ಬಂದರು ತಪ್ಪದೆ ಪಾಲ್ಗೊಂಡು ನಡೆಸಿಕೊಟ್ಟು ಬರುತ್ತಾರೆ.
ಇದೇ ರೀತಿ ಇತ್ತೀಚೆಗೆ ಸಾಯಿ ಸಂಗಮ ಡಯಾಗ್ನೋಸ್ಟಿಕ್ ಮತ್ತು ಹೆಲ್ತ್ ಸೆಂಟರ್ ಎನ್ನುವ ಆಸ್ಪತ್ರೆಯೊಂದರ ಉದ್ಘಾಟನೆ ಸಮಾರಂಭಕ್ಕೆ ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ಸಚಿವ ಆರ್.ಅಶೋಕ್ ಅವರನ್ನು ಅತಿಥಿಯಾಗಿ ಕರೆಸಲಾಗಿತ್ತು. ಈ ಕಾರ್ಯಕ್ರಮಕ್ಕೂ ಕೂಡ ಹೋಗಿ ಕಾರ್ಯಕ್ರಮ ನಡೆಸಿಕೊಟ್ಟ ಸಮಯದಲ್ಲಿ ಆರ್ ಅಶೋಕ್ ಅವರು ಅಶ್ವಿನಿ ಅವರ ಆರೋಗ್ಯ ವಿಚಾರಿಸಿದ್ದಾರೆ.
ಹಾಗೆಯೇ ಪುನೀತ್ ರಾಜಕುಮಾರ್ ಅವರ ಹೆಸರಿನಲ್ಲಿ ರಸ್ತೆ ಉದ್ಘಾಟನೆ ಮಾಡುವುದಾಗಿ ಈಗಾಗಲೇ ಹೇಳಿದ್ದೇವೆ. ಈ ಕಾರ್ಯಕ್ರಮಕ್ಕೆ ದರ್ಶನ್ ಅವರನ್ನು ಅತಿಥಿಯಾಗಿ ಕರೆಸೋಣ ಎಂದುಕೊಂಡಿದ್ದೇವೆ ಎಂದಾಗ ಅಶ್ವಿನಿ ಪುನೀತ್ ರಾಜಕುಮಾರ್ ಅವರು ದಯವಿಟ್ಟು ಕರೆಸಿ ನಿಮಗೆ ಯಾರು ಸರಿ ಅನಿಸುತ್ತಾರೆ ಅವರನ್ನು ಕರೆಸಿ, ನನ್ನದೇನು ಅಭ್ಯಂತರ ಇಲ್ಲ ಎಂದು ಹೇಳಿದ್ದಾರೆ.
ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗುತ್ತಿತ್ತು ದಚ್ಚು ಬಂದು ಈ ಕಾರ್ಯಕ್ರಮವನ್ನು ನಡೆಸಿಕೊಡಬೇಕು ಎಂದು ಅಪ್ಪು ಅಭಿಮಾನಿಗಳು ಕೇಳುತ್ತಿದ್ದಾರೆ. ಅಪ್ಪು ಹಾಗೂ ದರ್ಶನ್ ಅವರ ಕುಟುಂಬದ ನಡುವೆ ತಂದೆಯ ಕಾಲದಿಂದಲೂ ಕೂಡ ಉತ್ತಮ ಸ್ನೇಹವಿತ್ತು, ಈಗ ದರ್ಶನ್ ಅವರು ಸಹ ತಮ್ಮ ಸ್ನೇಹಿತನನ್ನು ಕಳೆದುಕೊಂಡ ನೋವಿನ ಭಾರವನ್ನು ಎದೆಯಲೊತ್ತು ತಿರುಗುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ಅವರೇ ಅತಿಥಿಯಾಗಿ ಬಂದರೆ ಇಬ್ಬರ ಅಭಿಮಾನಿಗಳಿಗೂ ಬಹಳ ಸಂತೋಷ ಆಗುತ್ತದೆ.