ಹೆಣ್ಣು ಮಕ್ಕಳ ಸ್ಥಾನವನ್ನು ಮೊದಲು ಕುಟುಂಬದಲ್ಲಿ ನಂತರ ಸಮಾಜದಲ್ಲಿ ಹೆಚ್ಚಿಸಲು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಹೆಣ್ಣು ಮಗುವಿನ ಜನನವನ್ನು ಉತ್ತೇಜಿಸಲು 2006-07ನೇ ಸಾಲಿನಲ್ಲಿ ಹೆಣ್ಣು ಮಕ್ಕಳ ರಕ್ಷಣೆಗಾಗಿ ಕರ್ನಾಟಕ ಸರ್ಕಾರವು ಬಾಗ್ಯಲಕ್ಷ್ಮಿ ಎನ್ನುವ ಈ ಹೊಸ ಯೋಜನೆಯನ್ನು ಜಾರಿಗೆ ತಂದಿತು. ಈ ಯೋಜನೆಯ ಆರ್ಥಿಕ ಸೌಲಭ್ಯವಾಗಿ ಒಂದು ಲಕ್ಷ ರೂಪಾಯಿ ಹಣವನ್ನು ಹೆಣ್ಣು ಮಗುವಿಗೆ ಅದರ ತಾಯಿ /ತಂದೆ/ಪೋಷಕರ ಮೂಲಕ ಕೆಲವು ನಿಬಂಧನೆಗಳನ್ನು ಪೂರೈಸಿದ್ದಲ್ಲಿ ನೀಡಲಾಗುವುದು.
ಭಾಗ್ಯಲಕ್ಷ್ಮಿ ಯೋಜನೆಗೆ ಇರುವ ನಿಬಂಧನೆಗಳು:-
● ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ 31.03.2006 ರ ನಂತರ ಜನಿಸಿದ ಹೆಣ್ಣು ಮಕ್ಕಳು ಈ ಯೋಜನೆಯಡಿ ಫಲಾನುಭವಿಗಳಾಗಿ ನೋಂದಾಯಿಸಿಕೊಳ್ಳಲು ಅರ್ಹರಿರುತ್ತಾರೆ.
● ಮಗುಜನಿಸಿದ ಒಂದು ವರ್ಷದವರೆಗೂ ಜನನ ಪ್ರಮಾಣ ಪತ್ರವನ್ನು ನೀಡಿ ನೋಂದಾಯಿಸಲು ಅವಕಾಶವಿರುತ್ತದೆ.
● ಈ ಯೋಜನೆಯನ್ನು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಇಬ್ಬರು ಹೆಣ್ಣು ಮಕ್ಕಳಿಗೆ ಸೀಮಿತಗೊಳಿಸಲಾಗಿದೆ.
● ಫಲಾನುಭವಿಗಳಾಗುವ ಹೆಣ್ಣು ಮಕ್ಕಳ ತಂದೆ ಅಥವಾ ತಾಯಿ ಶಾಶ್ವತ ಕುಟುಂಬ ಯೋಜನೆ ಅಳವಡಿಸಿಕೊಂಡಿರಬೇಕು, ಮನೆಯಲ್ಲಿ ಮಕ್ಕಳ ಸಂಖ್ಯೆ 2 ಕ್ಕಿಂತ ಹೆಚ್ಚಿರಬಾರದು.
● ಭಾಗ್ಯಲಕ್ಷ್ಮಿ ಯೋಜನೆಯಡಿ ನೋಂದಣಿಯಾದ ಕುಟುಂಬದಲ್ಲಿನ ಮೊದಲನೇ ಹೆಣ್ಣು ಮಗುವಿನ ಹೆಸರಿನಲ್ಲಿ 19,300 ಹಾಗೂ ಅದೇ ಕುಟುಂಬದಲ್ಲಿನ ಎರಡನೇ ಹೆಣ್ಣು ಮಗುವಿನ ಹೆಸರಿನಲ್ಲಿ 18,350 ರೂಗಳನ್ನು ಪಾಲುದಾರರ ಹಣಕಾಸು ಸಂಸ್ಥೆಯಲ್ಲಿ ಪ್ರಾರಂಭಿಕ ಠೇವಣಿ ಇಡಲಾಗುತ್ತದೆ.
● 18 ವರ್ಷ ಪೂರ್ಣಗೊಂಡ ನಂತರದಲ್ಲಿ ಹೆಣ್ಣು ಮಕ್ಕಳು ಒಂದು ಲಕ್ಷ ಪರಿಪಕ್ವ ಮೊತ್ತ ಪಡೆಯಲು ಅರ್ಹರಿರುತ್ತಾರೆ.
ಈ ಯೋಜನೆಯ ಉದ್ದೇಶಗಳು:-
● ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಹೆಣ್ಣು ಮಕ್ಕಳ ಜನನವನ್ನು ಉತ್ತೇಜಿಸುವ ಮತ್ತು ಆತ್ಮಸ್ಥೈರ್ಯ ತುಂಬುವುದು.
● ಬಾಲ ಕಾರ್ಮಿಕತೆ, ಹೆಣ್ಣು ಭ್ರೂಣ ಹತ್ಯೆ, ಬಾಲ್ಯ ವಿವಾಹ ಮತ್ತು ಹೆಣ್ಣು ಮಕ್ಕಳ ಮಾರಾಟ ಮುಂತಾದ ಸಾಮಾಜಿಕ ಪಿಡುಗುಗಳನ್ನು ತಡೆಗಟ್ಟುವುದು.
● ಆರೋಗ್ಯ, ಶಿಕ್ಷಣ, ಪೋಷಣೆ ಮತ್ತು ಪೌಷ್ಠಿಕತೆಯ ಮಟ್ಟವನ್ನು ಉತ್ತಮ ಪಡಿಸುವುದರ ಮೂಲಕ ಹೆಣ್ಣು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯನ್ನು ಉತ್ತಮಪಡಿಸುವುದು.
● ಹೆಣ್ಣು ಮಗುವಿಗೆ ಆರ್ಥಿಕ ನೆರವು ನೀಡುವುದರ ಮೂಲಕ ಅವರನ್ನು ಸಮಾಜದಲ್ಲಿ ಸದೃಢರನ್ನಾಗಿ ಮಾಡುವುದು.
ಈ ಯೋಜನೆಯ ಸೌಲಭ್ಯವನ್ನು ಪಡೆಯಲು ಇರಬೇಕಾದ ಅರ್ಹತೆಗಳು:-
● ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಗುರುತಿಸಿ ಶಾಶ್ವತ BPL ಕಾರ್ಡ್ ಅಥವಾ ಆದ್ಯತ ಕುಟುಂಬ ಪಡಿತರ ಚೀಟಿ ಹೊಂದಿರುವ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದಲ್ಲಿ ಜನಿಸಿದ ಇಬ್ಬರು ಹೆಣ್ಣು ಮಕ್ಕಳು ಅರ್ಹರಿರುತ್ತಾರೆ.
● ಕುಟುಂಬದಲ್ಲಿ ಮಕ್ಕಳ ಸಂಖ್ಯೆ ಎರಡನ್ನು ಮೀರಿರಬಾರದು, ಮೊದಲನೇ ಹೆರಿಗೆಯಲ್ಲೇ ಅಥವಾ ಎರಡನೇ ಹೆರಿಗೆಯಲ್ಲಿ ಅವಳಿ ಅಥವಾ ತ್ರಿವಳಿ ಹೆಣ್ಣು ಮಕ್ಕಳಾಗಿದ್ದಲ್ಲಿ ಎಲ್ಲಾ ಹೆಣ್ಣು ಮಕ್ಕಳು ಈ ಸೌಲಭ್ಯ ಪಡೆಯಲು ಅರ್ಹರಿರುತ್ತಾರೆ.
● ಗ್ರಾಮೀಣ ಪ್ರದೇಶ ಹಾಗೂ ನಗರ ಪ್ರದೇಶಗಳಲ್ಲೂ ಅನುಷ್ಠಾನಗೊಳಿಸಲಾಗುವುದು.
● ಅಂಗನವಾಡಿ ಕೇಂದ್ರಗಳಲ್ಲಿ ಪೋಷಕರು ಮೊದಲು ನೋಂದಾಯಿಸಬೇಕು, ಅಂಗನವಾಡಿ ಕೇಂದ್ರಗಳು ಇಲ್ಲದ ಸ್ಥಳದಲ್ಲಿ ಹತ್ತಿಯಲ್ಲಿರುವ ಅಂಗನವಾಡಿ ಕೇಂದ್ರಗಳಲ್ಲಿ ನೋಂದಾಯಿಸಬಹುದು.
● ಮಗುವಿನ ಜನನ ಪ್ರಮಾಣ ಪತ್ರದ ದಾಖಲೆಯನ್ನು ಕಡ್ಡಾಯವಾಗಿ ಹೊಂದಿರಬೇಕು.
● ಪರಿಪಕ್ವ ಮೊತ್ತವನ್ನು ಪಡೆಯಲು ಮಗು ಕಡ್ಡಾಯವಾಗಿ 8ನೇ ತರಗತಿವರೆಗೂ ವಿದ್ಯಾಭ್ಯಾಸ ಮಾಡಿರಲೇಬೇಕು.
● ವಿಕಲಚೇತನ ಮಕ್ಕಳಿಗೆ ಇದರಲ್ಲಿ ಸಡಿಲಿಕೆ ಇದೆ. ಜಿಲ್ಲಾಧಿಕಾರಿಗಳ ಅನುಮತಿ ಪಡೆದು 5ನೇ ತರಗತಿ ವಿದ್ಯಾಭ್ಯಾಸ ಮಾಡಿದ್ದರು ಸಾಕು.
● 5ನೇ / 8ನೇ ತರಗತಿ ಉತ್ತೀರ್ಣರಾಗಿರುವ ಬಗ್ಗೆ ಶಾಲಾ ಮುಖ್ಯೋಪಾಧ್ಯಾಯರಿಂದ ಧೃಡೀಕರಣ ಪತ್ರ ಸಲ್ಲಿಸಬೇಕು.
● ಬಾಲ ಕಾರ್ಮಿಕಳಾಗಿರತಕ್ಕದ್ದಲ್ಲ.
● 18 ವರ್ಷ ತುಂಬುವ ಮುನ್ನ ವಿವಾಹವಾಗುವಂತಿಲ್ಲ.
● ಈ ಮೇಲಿನ ಅರ್ಹತೆಗಳಲ್ಲಿ ಯಾವುದನ್ನು ಮೀರಿದರೂ ಕೂಡ ಈ ಸೌಲಭ್ಯವನ್ನು ಸರ್ಕಾರವು ಮುಟ್ಟುಗೋಲು ಹಾಕಿಕೊಳ್ಳುತ್ತದೆ.