ಸಾಮಾನ್ಯವಾಗಿ ಹಲವರು ಮಕ್ಕಳು ತಮ್ಮ ವಯಸ್ಸಾದ ಹೆತ್ತವರನ್ನು ತಮ್ಮೊಂದಿಗೆ ಹೊರಗೆ ಊಟಕ್ಕಾಗಿ, ಬೇರೆ ಬೇರೆ ಸ್ಥಳಗಳಿಗೆ ಪ್ರವಾಸಕ್ಕೆ, ಯಾವುದಾದರೂ ಕಾರ್ಯಕ್ರಮಗಳಿಗೆ ಕರೆದುಕೊಂಡು ಹೋಗಲು ಇಷ್ಟಪಡುವುದಿಲ್ಲ. ಆ ಸಮಯದಲ್ಲಿ ಮಕ್ಕಳು ತಮ್ಮ ವೃದ್ಧರಾದ ಪೋಷಕರಿಗೆ – ನೀವು ಅಲ್ಲಿಗೆ ಬಂದು ಏನು ಮಾಡುತ್ತೀರಿ? ನಿಮಗೆ ಅಷ್ಟು ದೂರ ಬರಲು ಶಕ್ತಿಯಿಲ್ಲ, ಬಂದರೂ ಸರಿಯಾಗಿ ತಿನ್ನುವುದಿಲ್ಲ. ಸರಿಯಾಗಿ ಓಡಾಡಲು ಆಗುವುದಿಲ್ಲ, ನಿಮಗೆ ಆಯಾಸವಾಗುತ್ತದೆ ನೀವು ಮನೆಯಲ್ಲೇ ಇರಿ, ಅದು ನಿಮಗೇ ಒಳ್ಳೆಯದು ಎಂದೆಲ್ಲಾ ಹೇಳುತ್ತಾರೆ.
ಆದರೆ ಇಲ್ಲಿ ಒಬ್ಬ ಮಗ ತನ್ನ ವಯಸ್ಸಾದ ಮುಗ್ಧ ತಂದೆಯನ್ನು ಊಟಕ್ಕೆಂದು ಒಂದು ದೊಡ್ಡ ರೆಸ್ಟೋರೆಂಟ್ ಗೆ ಕರೆದುಕೊಂಡು ಹೋಗುತ್ತಾನೆ ಅಲ್ಲಿ ಆ ಮಗ ತಂದೆಗೆ ಏನು ಮಾಡುತ್ತಾನೆ ಎಂದು ನೋಡೋಣ. ಒಬ್ಬ ಮಗನು ತನ್ನ ವಯಸ್ಸಾದಂತಹ ತಂದೆಯನ್ನು ರಾತ್ರಿ ಊಟಕ್ಕಾಗಿ ಒಂದು ಉತ್ತಮವಾದ ರೆಸ್ಟೋರೆಂಟ್‌ಗೆ ಕರೆದುಕೊಂಡು ಹೋಗುತ್ತಾನೆ. ಅಲ್ಲಿ ಆ ವಯಸ್ಸಾದ ಅಪ್ಪ ನಡುಗುವ ತನ್ನ ಕೈಯಿಂದ ಊಟ ಮಾಡುವಾಗ ಬಟ್ಟೆಗಳ ಮೇಲೆ ಹಲವಾರು ಬಾರಿ ಆಹಾರವನ್ನು ಚೆಲ್ಲಿಕೊಂಡು, ಬಾಯಿ, ಗಲ್ಲ , ಕುತ್ತಿಗೆ ಮೇಲೆಲ್ಲಾ ಆಹಾರದ ತುಣುಕುಗಳನ್ನು ಬೀಳಿಸಿಕೊಂಡು ಊಟ ಮಾಡುತ್ತಾ ಇರುತ್ತಾರೆ.
ಆಗ ರೆಸ್ಟೋರೆಂಟ್‌ನಲ್ಲಿ ಊಟ ಮಾಡಲು ಕುಳಿತಿದ್ದ ಇತರೆ ಜನರು ಆ ವೃದ್ಧನನ್ನು ಅಸಹ್ಯದಿಂದ ನೋಡುತ್ತಿರುತ್ತಾರೆ. ಆದರೆ ಅವರ ಮಗನು ಶಾಂತವಾಗಿ ತಾಳ್ಮೆಯಿಂದ ಕುಳಿತು ಅಪ್ಪನೊಡನೆ ತಾನು ಊಟ ಮಾಡುತ್ತಾನೆ. ಊಟವಾದ ನಂತರ ಮಗ ಯಾವುದೇ ಮುಜುಗರ, ನಾಚಿಕೆಯಿಲ್ಲದೆ ತನ್ನ ತಂದೆಯನ್ನು ವಾಶ್ ರೂಂಗೆ ಕರೆದುಕೊಂಡು ಹೋಗಿ ಅವರ ಬಾಯಿ ಮುಖ ಕುತ್ತಿಗೆ ಭಾಗಗಳಿಂದ ಆಹಾರದ ತುಣುಕುಗಳನ್ನು ಒರಸಿ ತೆಗೆದು ಅವರ ಬಟ್ಟೆಗಳನ್ನು ತನ್ನ ಕರವಸ್ತ್ರಕ್ಕೆ ನೀರು ಹಾಕಿಕೊಂಡು ಚೆನ್ನಾಗಿ ಸ್ವಚ್ಛಗೊಳಿಸಿ, ನಂತರ ತಂದೆಯ ತಲೆಗೂದಲನ್ನು ಬಾಚಿ ಕನ್ನಡಕದ ಗಾಜುಗಳನ್ನು ತೊಳೆದು ಬಟ್ಟೆಯಿಂದ ಒರಸಿ ಮತ್ತೆ ಹಾಕಿ ನಂತರ ಅವರನ್ನು ಹೊರಗೆ ಕರೆತರುತ್ತಾನೆ.
ಆಗ ರೆಸ್ಟೋರೆಂಟ್‌ನಲ್ಲಿ ಎಲ್ಲರೂ ಮೌನವಾಗಿ ಅವನತ್ತಲೇ ನೋಡುತ್ತಿದ್ದರು ಅನಂತರ ಅವನು ಬಿಲ್ ಪಾವತಿಸಿ ಅಪ್ಪನೊಂದಿಗೆ ಹೊರಗೆ ಹೊರಡುವಾಗ ಅಲ್ಲಿ ಊಟ ಮಾಡುತ್ತಿದ್ದ ಮತ್ತೊಬ್ಬ ವೃದ್ಧರು ಅವನನ್ನು ಕರೆದು ನೀನು ಇಲ್ಲಿ ಏನನ್ನಾದರೂ ಬಿಟ್ಟು ಹೋಗುತ್ತಿರುವೆ ಎಂದು ನಿನಗೆ ಅನ್ನಿಸುತ್ತಿಲ್ಲವೇ? ಎಂದು ಕೇಳುತ್ತಾರೆ. ಅದಕ್ಕೆ ಉತ್ತರಿಸಿದ ಮಗನು – ಇಲ್ಲ ಸರ್, ನಾನು ಏನನ್ನೂ ಬಿಟ್ಟಿಲ್ಲ ಎಲ್ಲವನ್ನೂ ತೆಗೆದುಕೊಂಡಿದ್ದೇನೆ ಎಂದು ಹೇಳುತ್ತಾನೆ. ಆಗ ಆ ವೃದ್ಧರು ಹೇಳುತ್ತಾರೆ – ಮಗೂ , ನೀನು ಈ ರೆಸ್ಟೋರೆಂಟ್ ನಲ್ಲಿ ಪ್ರತಿಯೊಬ್ಬ ಮಗನಿಗೂ ಒಂದು ಶಿಕ್ಷಣವನ್ನು ಮತ್ತು ಪ್ರತಿಯೊಬ್ಬ ತಂದೆಗೂ ಒಂದು ಭರವಸೆಯನ್ನು ಬಿಟ್ಟು ಹೋಗುತ್ತಿರುವೆ ಎಂದು ಮೆಚ್ಚುಗೆ ವ್ಯಕ್ತ ಪಡಿಸುತ್ತಾರೆ.
ನಾವು ಚಿಕ್ಕವರಿದ್ದಾಗ ನಮ್ಮ ಅಪ್ಪ ನಮ್ಮನ್ನು ತಮ್ಮ ಹೆಗಲು ಮೇಲೆ ಹೊತ್ತು ತಮ್ಮ ತೋಳುಗಳಲ್ಲಿ ಅವಚಿಕೊಂಡು ಕರೆದುಕೊಂಡು ಹೋಗುತ್ತಿದ್ದರು ಎಂಬುದನ್ನು ಮಕ್ಕಳು ಮರೆತು ಬಿಡುತ್ತಾರೆ. ಮಗುವಾಗಿದ್ದಾಗ ನಮಗೆ ಸರಿಯಾಗಿ ತಿನ್ನಲು ಸಾಧ್ಯವಾಗದಿದ್ದಾಗ, ತಂದೆ ತಾಯಿ ಅವರ ಕೈಯಿಂದ ನಮಗೆ ಆಹಾರವನ್ನು ತಿನ್ನಿಸುತ್ತಿದ್ದರು ಮತ್ತು ನಮ್ಮ ಬಾಯಿಂದ ಆಹಾರವು ಮೈ ಮೇಲೆ ಬಟ್ಟೆಗಳ ಮೇಲೆ ಬಿದ್ದಾಗ, ಅವರು ನಮ್ಮನ್ನು ಬೈಯ್ಯದೆ ಪ್ರೀತಿಯಿಂದ ಸ್ವಚ್ಛ ಮಾಡುತ್ತಿದ್ದರು. ಆದರೆ ಅದೇ ಹೆತ್ತವರು ವೃದ್ಧಾಪ್ಯದಲ್ಲಿ ಮಕ್ಕಳಿಗೆ ಹೊರೆಯಾಗುವುದು ಏಕೆ.? ಎಲ್ಲರೂ ಪೋಷಕರನ್ನು ಗೌರವಿಸಿ, ಸೇವೆ ಮಾಡಿ, ಮತ್ತು ಪ್ರೀತಿಯನ್ನು ನೀಡಿ. ನಮಗೂ ವಯಸ್ಸಾಗುತ್ತದೆ. ನಾವೂ ವೃದ್ಧರಾಗುತ್ತೇವೆ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ. ಈ ಉತ್ತಮ ಸಂದೇಶವನ್ನು ಮತ್ತಷ್ಟು ಜನರಿಗೆ ತಲುಪಿಸಿ.