ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಮತ್ತು ಉಪಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಅವರು ಚುನಾವಣೋತ್ತರವಾಗಿ ನೀಡಿದ್ದ ಭರವಸೆಯಂತೆ 5 ಗ್ಯಾರಂಟಿ ಕಾರ್ಡ್ ಯೋಜನೆಗಳನ್ನು ಕರ್ನಾಟಕದಲ್ಲಿ ಜಾರಿಗೆ ತಂದಿದ್ದಾರೆ. ಅದರಲ್ಲಿ ಮಹಿಳೆಯರಿಗಾಗಿಯೇ ಇರುವ ಎರಡು ವಿಶೇಷ ಯೋಜನೆಗಳು ಎಂದರೆ ಗೃಹಲಕ್ಷ್ಮಿ ಯೋಜನೆ ಮತ್ತು ಶಕ್ತಿ ಯೋಜನೆ. ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಕರ್ನಾಟಕದ ಪ್ರತಿ ಕುಟುಂಬದ ಮಹಿಳೆಗೂ ಕೂಡ ಪ್ರತಿ ತಿಂಗಳು ಕುಟುಂಬ ನಿರ್ವಹಣೆಗಾಗಿ 2000ರೂ. ಸಹಾಯಧನ ಸಿಗಲಿದೆ.
ಹಾಗೆಯೇ ಶಕ್ತಿ ಯೋಜನೆ ಅಡಿ ವಿದ್ಯಾರ್ಥಿನಿಯರು ಸೇರಿದಂತೆ ಕರ್ನಾಟಕದ ಎಲ್ಲಾ ಮಹಿಳೆಯರು ಕೂಡ ಕರ್ನಾಟಕದ ಗಡಿ ಒಳಗೆ ಐಷಾರಾಮಿ ಬಸ್ ಗಳನ್ನು ಹೊರತುಪಡಿಸಿ ಕರ್ನಾಟಕ ಸಾರಿಗೆ ಸಂಸ್ಥೆಯ ಎಲ್ಲಾ ಬಸ್ ಗಳಲ್ಲಿ ಉಚಿತ ಪ್ರಯಾಣವನ್ನು ಮಾಡಬಹುದಾಗಿದೆ. ಇದಕ್ಕೆ ಸಂಬಂಧಪಟ್ಟ ಮಾರ್ಗಸೂಚಿ ಮತ್ತು ನಿಬಂಧನೆಗಳನ್ನು ಹೊಂದಿರುವ ಆದೇಶ ಪತ್ರವೂ ಕೂಡ ಸರ್ಕಾರದಿಂದ ಹೊರ ಬಿದ್ದಿದೆ.
ಇದರಲ್ಲಿ ತಿಳಿಸಿರುವ ಪ್ರಕಾರ ಗೃಹಲಕ್ಷ್ಮಿ ಯೋಜನೆಯ ಸಹಾಯಧನಕ್ಕೆ ಜೂನ್ 15ರಿಂದ ಅರ್ಜಿ ಆಹ್ವಾನ ಮಾಡಲಾಗಿದೆ. ಜೂನ್ 15ರಿಂದ ಜುಲೈ 15ರ ತನಕ ಮಹಿಳೆಯರು ಆನ್ಲೈನ್ ಮೂಲಕ ಅಥವಾ ಆಫ್ಲೈನ್ ಮೂಲಕ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸುವವರು ಹತ್ತಿರದಲ್ಲಿರುವ ನಾಡಕಚೇರಿಗೆ ಹೋಗಿ ಅಥವಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಚೇರಿಗಳಲ್ಲಿ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಆನ್ಲೈನಲ್ಲಿ ಅರ್ಜಿ ಸಲ್ಲಿಸುವುದು ಕೂಡ ಬಹಳ ಸರಳವಾಗಿದ್ದು PC, ಮೊಬೈಲ್ ಅಥವಾ CSC ಸೈಬರ್ ಸೆಂಟರ್, ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಗಳಿಗೆ ಹೋಗಿ ಸೇವಾ ಸಿಂಧು ಪೋರ್ಟಲ್ ಮೂಲಕ ಗೃಹಲಕ್ಷ್ಮಿ ಯೋಜನೆಯ ಸಹಾಯಧನಕ್ಕೆ ಅರ್ಜಿ ಸಲ್ಲಿಸಬಹುದು.
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವವರು ಪೂರಕ ದಾಖಲೆಗಳಾಗಿ ಕುಟುಂಬದ ರೇಷನ್ ಕಾರ್ಡ್, ಮಹಿಳೆಯ ಆಧಾರ್ ಕಾರ್ಡ್, ಮಹಿಳೆಯ ಪತಿಯ ಆಧಾರ್ ಕಾರ್ಡ್, ಮಹಿಳೆಯ ವೋಟರ್ ಐಡಿ ಮತ್ತು ಮಹಿಳೆಯ ಪತಿಯ ವೋಟರ್ ಐಡಿ ಇವುಗಳ ಪ್ರತಿಗಳನ್ನು ತಪ್ಪದೆ ತೆಗೆದುಕೊಂಡು ಹೋಗಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಇದರ ಜೊತೆಗೆ NPCI ಮ್ಯಾಪಿಂಗ್ ಆಗಿ ಆಧಾರ್ ಸೀಡಿಂಗ್ ಆಗಿರುವ ಮಹಿಳೆಯ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿಯನ್ನು ಕೂಡ ತೆಗೆದುಕೊಂಡು ಹೋಗಿ ಮೊಬೈಲ್ ಸಂಖ್ಯೆಯನ್ನು ಕೊಟ್ಟು ಅರ್ಜಿ ಸಲ್ಲಿಸಬೇಕು. ಜುಲೈ 15ರಿಂದ ಆಗಸ್ಟ್ 15 ರವರೆಗೆ ಅರ್ಜಿಗಳ ಪರಿಶೀಲನೆ ನಡೆದು ಆಗಸ್ಟ್ 15ರಂದು ಕರ್ನಾಟಕದ ಎಲ್ಲಾ ಮಹಿಳೆಯರ ಖಾತೆಗೂ ಕೂಡ ಸಹಾಯಧನವನ್ನು ನೇರ ವರ್ಗಾವಣೆ ಮೂಲಕ ಜಮೆ ಮಾಡಲಿದ್ದೇವೆ ಎಂದು ಆದೇಶ ಪತ್ರದಲ್ಲಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಇದೇ ರೀತಿ ಶಕ್ತಿ ಯೋಜನೆಗೂ ಕೂಡ ಜೂನ್ 11 ರಿಂದಲೇ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದ್ದರು ಮೂರು ತಿಂಗಳ ಒಳಗೆ ಮಹಿಳೆಯರು ಶಕ್ತಿ ಸ್ಮಾರ್ಟ್ ಕಾರ್ಡ್ ಪಡೆಯಬೇಕು ಎಂದು ತಿಳಿಸಲಾಗಿದೆ. ಸೇವಾ ಸಿಂಧು ಪೋರ್ಟಲ್ ಅಲ್ಲಿ ನೋಂದಾಯಿಸಿ ಫಲಾನುಭವಿಗಳು ಈ ಶಕ್ತಿ ಸ್ಮಾರ್ಟ್ ಕಾರ್ಡನ್ನು ಪಡೆದುಕೊಳ್ಳಬೇಕು.
ಆಧಾರ್ ಕಾರ್ಡ್, ವಿಳಾಸದ ಪುರಾವೆ ಹಾಗೂ ಮೊಬೈಲ್ ಸಂಖ್ಯೆ ಮತ್ತು ಭಾವಚಿತ್ರವನ್ನು ನೀಡಿ CSC ಸೆಂಟರ್ ಗಳಲ್ಲಿ ಅಥವಾ ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಗಳಲ್ಲಿ ನೋಂದಾಯಿಸಿ ಈ ಶಕ್ತಿ ಸ್ಮಾರ್ಟ್ ಕಾರ್ಡನ್ನು ಪಡೆಯಬಹುದು. ಅಲ್ಲಿಯವರೆಗೂ ಕೂಡ ಮಹಿಳೆಯರು ಆಧಾರ್ ಕಾರ್ಡ್, ವೋಟರ್ ಐಡಿ ಅಥವಾ ಡ್ರೈವಿಂಗ್ ಲೈಸೆನ್ಸ್ ತೋರಿಸಿ ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ. ಆದರೆ ಮೂರು ತಿಂಗಳ ನಂತರ ಈ ಪ್ರಯೋಜನ ಪಡೆಯಲು ಶಕ್ತಿ ಸ್ಮಾರ್ಟ್ ಕಾರ್ಡ್ ಕಡ್ಡಾಯವಾಗಲಿದೆ. ಆದ್ದರಿಂದ ಈ ಕೂಡಲೇ ಅರ್ಜಿ ಸಲ್ಲಿಸಿ ಕಾರ್ಡ್ ಪಡೆದುಕೊಳ್ಳಿ.