ನಮ್ಮ ಹಿಂದೂ ಸಂಪ್ರದಾಯದಲ್ಲಿ ಅನೇಕ ಸ್ಥಳಗಳಲ್ಲಿ ಲಕ್ಷ್ಮಿ ವಾಸವಾಗಿರುತ್ತಾಳೆ ಎಂದು ನಂಬಿದ್ದೇವೆ. ಅದರಲ್ಲಿ ಮನೆಯ ಮುಂಭಾಗದಲ್ಲಿರುವ ಹೊಸ್ತಿಲು ಕೂಡ ಒಂದು. ಹೊಸ್ತಿಲು ಇರುವ ಲಕ್ಷಣವನ್ನು ನೋಡಿ ಮನೆಯ ವಾತಾವರಣವನ್ನು ನಿರ್ಧರಿಸಿ ಇಡಬಹುದು. ಯಾಕೆಂದರೆ ಹೊಸ್ತಿಲು ಪೂಜೆ ಮಾಡುವುದರಿಂದ ಆ ಮನೆಯ ಅದೃಷ್ಟವೇ ಬದಲಾಗುತ್ತದೆ ಹಾಗೆಯೇ ಹೊಸ್ತಿಲಿಗೆ ಏನಾದರೂ ತಪ್ಪಾದ ವಿಧಾನದಿಂದ ರಂಗೋಲಿ ಹಾಕಿದರೆ ಪೂಜೆ ಮಾಡಿದರೆ ಕಷ್ಟ ತಪ್ಪಿದ್ದಲ್ಲ.
ಆದ್ದರಿಂದ ಹೊಸ್ತಿಲು ಪೂಜೆ ಮಾಡುವ ಸರಿಯಾದ ವಿಧಾನ ಯಾವುದು, ಯಾವ ರೀತಿ ಅದಕ್ಕೆ ರಂಗೋಲಿ ಹಾಕಬೇಕು ಯಾವ ರೀತಿ ಹಾಕಬಾರದು ಮತ್ತು ಯಾವ ಸಮಯದಲ್ಲಿ ಪೂಜೆ ಮಾಡಬೇಕು ಮತ್ತು ಇದರ ಹಿಂದಿರುವ ಕಾರಣ ಏನು ಇತ್ಯಾದಿ ವಿಷಯಗಳನ್ನು ತಿಳಿದುಕೊಂಡಿರಬೇಕು. ಈ ಅಂಕಣದಲ್ಲೂ ಸಹ ಅದನ್ನೇ ತಿಳಿಸುವ ಪ್ರಯತ್ನ ಮಾಡುತಿದ್ದೇವೆ.
ನಮ್ಮ ಭಾರತದ ಹಿಂದೂ ಕುಟುಂಬದ ಪ್ರತಿಯೊಂದು ಹೆಣ್ಣು ಮಗಳು ಕೂಡ ಹುಟ್ಟಿದಾಗಲಿಂದಲೂ ಇದನ್ನು ಅಭ್ಯಾಸ ಮಾಡಿಕೊಂಡು ಬಂದಿರುತ್ತಾಳೆ. ಯಾಕೆಂದರೆ ಮನೆಯಲ್ಲಿ ಹಿರಿಯರು ಯಾವಾಗಲೂ ಮನೆ ಮುಂದೆ ರಂಗೋಲಿ ಹಾಕುವುದು, ಹೊಸ್ತಿಲು ಪೂಜೆ ಮಾಡುವ ಜವಾಬ್ದಾರಿಯನ್ನು ಆ ಮನೆಯ ಹೆಣ್ಣು ಮಕ್ಕಳಿಗೆ ಕೊಟ್ಟಿರುತ್ತಾರೆ. ಆದರೆ ಗೊತ್ತಿಲ್ಲದೇ ತಪ್ಪು ತಪ್ಪಾಗಿ ಇದನ್ನು ಮಾಡಬಾರದು.
ಹೊಸ್ತಿಲು ಪೂಜೆ ಮಾಡುವ ಸರಿಯಾದ ವಿಧಾನ ಯಾವುದು ಎಂದು ಈಗ ನಾವು ಹೇಳುತ್ತೇವೆ, ಅದೇ ರೀತಿ ಇನ್ನು ಮುಂದೆ ಪಾಲಿಸಿ. ಹೊಸ್ತಿಲ ಎಡಭಾಗದಲ್ಲಿ ಶ್ರೀದೇವಿ ಮತ್ತು ಬಲಭಾಗದಲ್ಲಿ ಭೂದೇವಿ ಮಧ್ಯ ಭಾಗದಲ್ಲಿ ಶ್ರೀ ಲಕ್ಷ್ಮಿ ಸಮೇತ ನಾರಾಯಣಸ್ವಾಮಿ ನೆಲೆಸಿರುತ್ತಾರೆ ಎಂದು ಹೇಳುತ್ತಾರೆ. ಹಾಗಾಗಿ ಹೊಸ್ತಿಲನ್ನು ಯಾರೂ ತುಳಿಯಬಾರದು.
ಯಾವಾಗಲೂ ನೀರಿನಿಂದ ಅಥವಾ ಶುದ್ಧ ಬಟ್ಟೆಯಿಂದ ಸ್ವಚ್ಛ ಮಾಡಬೇಕು. ಮನೆಯಲ್ಲಿ ಕ್ಲೀನ್ ಮಾಡಲು ಬಳಸುವ ಬಟ್ಟೆಗಳಿಂದ ಅಥವಾ ಪೊರಕೆಯಿಂದ ಅಥವಾ ಬಾತ್ರೂಮ್ ಅಲ್ಲಿ ಬಳಸುವ ಮಗ್ ಗಳಿಂದ ಹೊಸ್ತಿಲನ್ನು ತೊಳೆಯಬಾರದು ಗುಡಿಸಬಾರದು. ಮೊದಲಿಗೆ ಹೊಸ್ತಿಲನ್ನು ಒಂದು ತಾಮ್ರದ ಅಥವಾ ಸ್ಟೀಲ್ ಚೊಂಬುಲಿಂದ ನೀರು ಹಾಕಿ ತೊಳೆದುಕೊಳ್ಳಬೇಕು ಅಥವಾ ಬಟ್ಟೆಯಿಂದ ಗುಡಿಸಿ ಶುದ್ಧ ನೀರಿನಲ್ಲಿ ಅದ್ದಿದ ಬಟ್ಟೆಯಿಂದ ಒರೆಸಿಕೊಳ್ಳಬೇಕು.
ರಂಗೋಲಿ ಹಾಕುವಾಗ ಯಾವಾಗಲೂ ಹೊಸ್ತಿನ ಮೇಲೆ 24 ಎಳೆ ರಂಗೋಲಿ ಗಳನ್ನು ಮಾತ್ರ ಹಾಕಬೇಕು. ಬಲ ಭಾಗಕ್ಕೆ ಎಂಟು ಮತ್ತು ಮಧ್ಯಭಾರಕೆ ಎಂಟು ಎಳೆಗಳಾಗಿ ಭಾಗ ಮಾಡಿಕೊಂಡು ಅದರ ನಡುವೆ ಚಿಕ್ಕಚಿಕ್ಕ ರಂಗೋಲಿ ಬಿಡಿಸಬಹುದು. ಯಾವುದೇ ಕಾರಣಕ್ಕೂ ಹೊಸ್ತಿಲಿನ ಮೇಲೆ ಗುಣಾಕಾರ ಚಿಹ್ನೆ ರೀತಿ ಇಂಟು ಮಾರ್ಕ್ ಬರುವ ಎಳೆಗಳನ್ನು ಬಿಡಿಸಬಾರದು, ಆ ರೀತಿಯ ರಂಗೋಲಿಗಳನ್ನು ಬಿಡಿಸುವುದರಿಂದ ಮನೆಗೆ ಕಷ್ಟ ತಪ್ಪಿದ್ದಲ್ಲ ಮತ್ತು ಮನೆಗೆ ಯಾವ ಸಮಸ್ಯೆಯೂ ಕೂಡ ಪರಿಹಾರ ಆಗುವುದಿಲ್ಲ.
ಇದಾದ ಬಳಿಕ ಹೊಸ್ತಿಲಿನ ಕೆಳಭಾಗದ ನೆಲದ ಮೇಲೆ ಕೂಡ ಚಿಕ್ಕ ರಂಗೋಲಿ ಹಾಕಬಹುದು, ಈ ರಂಗೋಲಿಯನ್ನು ಯಾವುದೇ ಕಾರಣಕ್ಕೂ ತುಳಿಯಬಾರದು. ಇದಾದ ಮೇಲೆ ಹೊಸ್ತಿಲಿಗೆ ಅರಿಶಿಣ ಮತ್ತು ಕುಂಕುಮ ಹಚ್ಚಿ ಹೂವಿನಿಂದ ಅಲಂಕರಿಸಬೇಕು. ಇದನ್ನು ಹೆಣ್ಣು ಮಕ್ಕಳು ಪ್ರತಿದಿನ ಬ್ರಾಹ್ಮಿ ಮುಹೂರ್ತದಲ್ಲೇ ಮಾಡಬೇಕು. ಯಾಕೆಂದರೆ ಆ ಸಮಯದಲ್ಲಿ ಲಕ್ಷ್ಮಿ ಸಂಚಾರ ಆಗುತ್ತದೆ ಎಂದು ಹಿರಿಯರು ಹೇಳುತ್ತಾರೆ.
ಆ ಸಮಯದಲ್ಲಿ ಮನೆ ಹೊಸ್ತಿಲನ್ನು ಈ ರೀತಿ ಸ್ವಚ್ಛವಾಗಿ ಅಚ್ಚುಕಟ್ಟಾಗಿ ಇಟ್ಟುಕೊಂಡಿದ್ದರೆ ಆ ಮನೆಯನ್ನು ಲಕ್ಷ್ಮಿ ಪ್ರವೇಶ ಮಾಡುತ್ತಾಳೆ ಎನ್ನುವುದು ನಂಬಿಕೆ. ಒಂದು ವೇಳೆ ಬ್ರಾಹ್ಮಿ ಮುಹೂರ್ತದಲ್ಲಿ ಪೂಜೆ ಮಾಡಲು ಆಗದೆ ಇದ್ದವರು ಸಂಜೆ ವೇಳೆ ಕೂಡ ಹೊಸ್ತಿಲು ಪೂಜೆ ಮಾಡಬಹುದು.