ತಂದೆ ತಾಯಿ ಆಗುವುದಕ್ಕೂ ಉತ್ತಮ ಪೋಷಕರಾಗುವುದಕ್ಕೂ ಬಹಳ ವ್ಯತ್ಯಾಸ ಇದೆ. ಹೆತ್ತವರೆಲ್ಲರಿಗೂ ಕೂಡ ತಮ್ಮ ಮಕ್ಕಳು ತಮ್ಮ ಸುತ್ತಮುತ್ತಲಿನವರಿಗಿಂತ ಹೆಚ್ಚು ಪ್ರಖ್ಯಾತಿ ಹೊಂದಬೇಕು, ಬುದ್ಧಿವಂತರಾಗಿರಬೇಕು, ಹೆಚ್ಚು ಹಣ ಸಂಪಾದನೆ ಮಾಡಬೇಕು, ಯಾವಾಗಲೂ ಮೇಲ್ಮಟ್ಟದಲ್ಲಿರಬೇಕು ಎಂದು ಆಸೆ ಪಡುತ್ತಾರೆ. ತಮ್ಮ ಮಕ್ಕಳು ಸಂಸ್ಕಾರವಂತರಾಗಿ ನಾಲ್ಕು ಜನರ ನಡುವೆ ಒಳ್ಳೆಯವರು ಎಂದು ಕರೆಸಿಕೊಂಡು ಗುರುತಿಸಿಕೊಳ್ಳಬೇಕು ಎಂದು ಆಸೆ ಪಡುತ್ತಾರೆ.
ಈ ರೀತಿ ಮಕ್ಕಳ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳುವುದು ತಪ್ಪಲ್ಲ, ಆದರೆ ಅದಕ್ಕೂ ಮುನ್ನ ಪೋಷಕರು ಕೂಡ ಉತ್ತಮ ಪೋಷಕರಾಗಲು ಪ್ರಯತ್ನಿಸಬೇಕು. ಮಕ್ಕಳು ಪೋಷಕರು ಹೇಳಿದ್ದಕ್ಕಿಂತ ಅವರು ಮಾಡಿದ್ದನ್ನೇ ನೋಡಿ ಕಲಿಯುವುದು ಹೆಚ್ಚು ಹಾಗಾಗಿ ಉತ್ತಮ ಪೋಷಕರಾಗಲು ಕೆಲ ಸೂತ್ರಗಳನ್ನು ಇಂದು ಈ ಅಂಕಣದಲ್ಲಿ ನಾವು ತಿಳಿಸುತ್ತಿದ್ದೇವೆ.
● ಮಕ್ಕಳು ಜೊತೆಯಲ್ಲಿದ್ದಾಗ ಹೆಚ್ಚಾಗಿ ಫೋನ್ ಗಳನ್ನು ಬಳಸಬೇಡಿ.
● ಮಕ್ಕಳು ನಿಮ್ಮ ಬಳಿ ಏನನ್ನಾದರೂ ಹೇಳಲು ಬಂದಾಗ ಗಮನವಿಟ್ಟು ಅದನ್ನು ಕೇಳಿಸಿಕೊಂಡು ಅದಕ್ಕೆ ಸ್ಪಂದಿಸಿ.
● ಮಕ್ಕಳ ದೃಷ್ಟಿಕೋನ ಹಾಗೂ ಅವರ ಅಭಿಪ್ರಾಯಗಳನ್ನು ಗೌರವದಿಂದ ಒಪ್ಪಿಕೊಳ್ಳಿ.
● ದಿನದಲ್ಲಿ ಸಾಧ್ಯವಾದಷ್ಟು ಹೊತ್ತು ಅವರ ಜೊತೆ ಮಾತುಕತೆಯಲ್ಲಿ ತೊಡಗಿಕೊಳ್ಳಿ.
● ಮಕ್ಕಳೆಂದ ಮಾತ್ರಕ್ಕೆ ಅವರ ಮೇಲೆ ನಿರ್ಲಕ್ಷ ಬೇಡ ಅವರಿಗೂ ಕೂಡ ಗೌರವ ಕೊಡಿ.
● ಮಕ್ಕಳ ಕ್ರಿಯೇಟಿವಿಟಿ ಅನ್ನು ಹೊಗಳಿ.
● ಮಕ್ಕಳೊಂದಿಗೆ ಯಾವಾಗಲೂ ಸಕಾರಾತ್ಮಕವಾಗಿ ಮಾತನಾಡಿ ಅವರ ಜೊತೆ ಸಂತಸದ ವಿಚಾರಗಳನ್ನು ಹಂಚಿಕೊಳ್ಳಿ.
● ಅವರ ಸ್ನೇಹಿತರ ಬಗ್ಗೆ ಹಾಗೂ ಅವರು ಇಷ್ಟಪಡುವ ವ್ಯಕ್ತಿಗಳ ಬಗ್ಗೆ ಒಳ್ಳೆಯ ಮಾತುಗಳನ್ನಾಡಿ.
● ಮಕ್ಕಳು ಮಾಡಿದ ಒಳ್ಳೆಯ ಕೆಲಸಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಿ.
● ಮಕ್ಕಳು ಹೇಳಿದ ವಿಚಾರಗಳನ್ನೇ ಪದೇಪದೇ ಹೇಳುತ್ತಿದ್ದರು ಕೂಡ ಕುತೂಹಲದಿಂದ ಮೊದಲ ಬಾರಿ ಕೇಳುತ್ತಿರುವ ರೀತಿಯೇ ಆಲಿಸಿ.
● ಕಳೆದು ಹೋದ ಕಹಿ ನೆನಪುಗಳನ್ನು ಪದೇ ಪದೇ ನೆನಪಿಸಬೇಡಿ.
● ಮಕ್ಕಳು ಜೊತೆಯಲ್ಲಿ ಇದ್ದಾಗ ಅವರಿಗೆ ಇಷ್ಟವಾಗದ ಅನುಚಿತ ಸಂಭಾಷಣೆಗಳು ಬೇಡ.
● ಮಕ್ಕಳ ಆಲೋಚನೆಗಳು ಮತ್ತು ಅವರು ಕೊಡುವ ಅಭಿಪ್ರಾಯಗಳಿಗೂ ಬೆಲೆ ಕೊಡಿ.
● ಮಕ್ಕಳನ್ನು ಪದೇ ಪದೇ ಚಿಕ್ಕವರು ಎಂದು ಜರಿಯಬೇಡಿ, ಮಕ್ಕಳ ಜೊತೆ ಅವರ ವಯಸ್ಸಿಗೆ ಅನುಸಾರವಾಗಿ ಗೌರವ ಕೊಡುತ್ತ ಬೆಳೆಸಿರಿ.
● ಮಕ್ಕಳು ಮಾತನಾಡಲು ಬಾಯಿ ತೆರೆದ ತಕ್ಷಣವೇ ಹೆದರಿಸಿ ಬಾಯಿ ಮುಚ್ಚಿಸಬೇಡಿ.
● ಅವರಿಗೆ ನಾಯಕತ್ವದ ಅವಕಾಶಗಳನ್ನು ನೀಡಿ, ಸಣ್ಣ ಪುಟ್ಟ ಜವಾಬ್ದಾರಿಗಳನ್ನು ವಹಿಸಿ ಮೇಲ್ವಿಚಾರಣೆ ಮಾಡಿ.
● ಮಕ್ಕಳ ಜೊತೆ ಗಟ್ಟಿಯಾದ ಧ್ವನಿಯಲ್ಲಿ ಮಾತನಾಡಬೇಡಿ.
● ಮಕ್ಕಳು ಮಾಡುವ ಒಳ್ಳೆಯ ಕೆಲಸಗಳಲ್ಲಿ ಹೊಸ ಪ್ರಯತ್ನಗಳಲ್ಲಿ ಜೊತೆಯಾಗಿ ನಿಲ್ಲಿರಿ.
● ಅವರ ಸಣ್ಣ ಪುಟ್ಟ ವಿಷಯಗಳನ್ನು ಕೂಡ ಗಮನಿಸಿ ಅವುಗಳ ಬಗ್ಗೆ ಹೊಗಳಿ ಪ್ರೋತ್ಸಾಹ ನೀಡುತ್ತಾ ಇರಿ.
● ಮಕ್ಕಳಲ್ಲಿ ಆಸಕ್ತಿ ಹೆಚ್ಚು ಹೀಗಾಗಿ ಎಷ್ಟೇ ಪ್ರಶ್ನೆ ಮಾಡಿದರು ಆದಷ್ಟು ತಾಳ್ಮೆಯಿಂದ ಪ್ರತಿಯೊಂದಕ್ಕೂ ಉತ್ತರಿಸುವ ಪ್ರಯತ್ನ ಮಾಡಿ.
● ಎಷ್ಟೇ ಒತ್ತಡದಲ್ಲಿ ಇದ್ದರೂ ಕೂಡ ದುಡುಕಿ ಮಕ್ಕಳ ಮೇಲೆ ರೇಗಾಡಬೇಡಿ. ಅವರ ಬಗ್ಗೆ ಕೀಳಾಗಿ ಮಾತನಾಡಬೇಡಿ.
● ನಿಮ್ಮ ಪ್ರಾರ್ಥನೆ, ಯೋಗ ಮುಂತಾದ ಸಂದರ್ಭಗಳಲ್ಲಿ ಸಾಧ್ಯವಾದಷ್ಟು ಅವರು ಜೊತೆಗೆ ಇರಲಿ.
● ಅವರ ಜೊತೆ ಮಾತನಾಡುವಾಗ, ಅವರೊಂದಿಗೆ ಆಟದಲ್ಲಿ ತೊಡಗಿರುವಾಗ ಬೋರಾದಂತೆ ಸುಸ್ತಾದಂತೆ ಕಾಣಿಸಿ ಕೊಳ್ಳಬೇಡಿ.
● ಅವರ ತಪ್ಪುಗಳನ್ನು ಹಂಗಿಸಿ ಮಾತನಾಡಬೇಡಿ.
● ಮಕ್ಕಳ ಜೊತೆ ಮಾತನಾಡುವಾಗ ನೀವು ಬಳಸುವ ಭಾಷೆ ಬಗ್ಗೆ ಗಮನ ಇರಲಿ.
● ಮಕ್ಕಳಿಗೆ ಇಷ್ಟವಾಗುವ ಹೆಸರಿನಿಂದಲೇ ಅವರನ್ನು ಕರೆಯಿರಿ.
● ನಿಮ್ಮ ಜೀವನದಲ್ಲಿ ಮಕ್ಕಳಿಗೆ ಮೊದಲನೆಯ ಆದ್ಯತೆ ನೀಡಿ. ಅವರೇ ನಿಮ್ಮ ಜೀವನದ ಪ್ರಮುಖ ಜವಾಬ್ದಾರಿ ಆಗಿರಲಿ.