● ಸಾರಿಗೆ ಉಪ್ಪು ಹೆಚ್ಚಾದರೆ ಒಂದು ಕಬ್ಬಿಣದ ಸೌಟನ್ನು ಕೆಂಪಾಗುವಂತೆ ಚೆನ್ನಾಗಿ ಕಾಯಿಸಿ ನಂತರ ಅದನ್ನು ಸಾರಿನ ಒಳಗೆ ಅದ್ದಿದರೆ ಆಟೋಮೆಟಿಕ್ ಆಗಿ ಉಪ್ಪು ಕಡಿಮೆ ಆಗುತ್ತದೆ.
● ದ್ರಾಕ್ಷಿ, ಟೊಮೆಟೊ, ಮೂಸಂಬಿ, ಕಿತ್ತಳೆ ಇಂತಹ ಹಣ್ಣುಗಳನ್ನು ಕುದಿಯುವ ನೀರಿಗೆ ಹಾಕಿ ಎರಡು ನಿಮಿಷ ಬಿಟ್ಟು ನಂತರ ತಣ್ಣೀರಿಗೆ ಹಾಕಿದರೆ ಅವುಗಳ ಮೇಲೆ ಇರುವ ಸಿಪ್ಪೆಯನ್ನು ಸುಲಭವಾಗಿ ಬಿಡಿಸಬಹುದು.
● ಗಾಜಿನ ಲೋಟಕ್ಕೆ ಬಿಸಿಯಾದ ಕಾಫಿ ಚಹಾ ಹಾಕುವ ಮುನ್ನ ಆ ಲೋಟಕ್ಕೆ ಒಂದು ಚಮಚ ಹಾಕಿ ನಂತರ ಕಾಫಿ ಟೀ ಹಾಕಿದರೆ ಮೊದಲಿಗೆ ಚಮಚ ಅದರ ಬಿಸಿಯನ್ನು ಹೀರಿಕೊಳ್ಳುವ ಕಾರಣ ಗಾಜಿನ ಗ್ಲಾಸು ಬಿಸಿಗೆ ಒಡೆಯುವುದು ತಪ್ಪುತ್ತದೆ.
● ಕಾಫಿಗೆ ಒಂದು ಚಿಟಿಕೆ ಉಪ್ಪನ್ನು ಹಾಕಿ ಕಲಸಿ ಕುಡಿದರೆ ಕಾಫಿಯ ರುಚಿ ಇನ್ನಷ್ಟು ಹೆಚ್ಚಾಗುತ್ತದೆ.
● ಆಲೂಗೆಡ್ಡೆ ಬೇಯಿಸಿ ಆ ನೀರಿನಿಂದ ಬೆಳ್ಳಿ ಮತ್ತು ಇತರ ಲೋಹದ ಪಾತ್ರೆಗಳನ್ನು ಅಚ್ಚುಕಟ್ಟಾಗಿ ತೊಳೆಯಬಹುದು.
● ಟೀ ಸೊಪ್ಪನ್ನು ಗಾಜಿನ ಜಾಡಿಗಳಲ್ಲಿ ಹಾಕಿ ಇಟ್ಟರೆ ಟೀ ರುಚಿ ಇನ್ನಷ್ಟು ಹೆಚ್ಚಾಗುತ್ತದೆ. ಟೀ ಕುದಿಯುವಾಗ ಕಿತ್ತಾಳೆ ಸಿಪ್ಪೆ ಅಥವಾ ಏಲಕ್ಕಿ ಸಿಪ್ಪೆಯನ್ನು ಹಾಕಿದರೆ ಆ ಟೀ ಗೆ ವಿಶೇಷ ರುಚಿ ಬರುತ್ತದೆ.
● ತೊಗರಿ ಬೇಳೆಯನ್ನು ಬೇಯಲು ಇಡುವಾಗ ಅದರ ಜೊತೆ ಒಂದು ಚೂರು ತೆಂಗಿನ ಕಾಯಿಯನ್ನು ಬೇಯಲು ಇಟ್ಟರೆ ಬೇಳೆ ಬೇಗ ಬೇಯುತ್ತದೆ ಮತ್ತು ಚೆನ್ನಾಗಿ ಬೇಯುತ್ತದೆ.
● ಕಡಗೋಲನ್ನು ಬಿಸಿನೀರಿಗೆ ಹಾಕಿ ತೆಗೆದು ಮಜ್ಜಿಗೆ ಕಡೆದರೆ ಅದಕ್ಕೆ ಬೆಣ್ಣೆ ಅಂಟುವುದಿಲ್ಲ. ಮಳೆಗಾಲದಲ್ಲಿ ಮಿಕ್ಸಿಯಲ್ಲಿ ಬೆಣ್ಣೆ ತೆಗೆಯುವಾಗ ಬಿಸಿ ನೀರನ್ನು ಮತ್ತು ಬೇಸಿಗೆ ಕಾಲದಲ್ಲಿ ಮಿಕ್ಸಿಯಲ್ಲಿ ಬೆಣ್ಣೆ ತೆಗೆಯುವಾಗ ತಂಪು ನೀರನ್ನು ಹಾಕಿದರೆ ಬೆಣ್ಣೆ ಬೇಗ ಬರುತ್ತದೆ.
● ಹಾಲು ಕಾಯಿಸುವಾಗ ಆ ಪಾತ್ರೆಯಲ್ಲಿ ಒಂದು ಚಿಕ್ಕ ಸೌಟು ಅಥವಾ ಚಮಚವನ್ನು ಹಾಕಿ ಇಟ್ಟರೆ ಹಾಲು ಉಕ್ಕಿ ಚೆಲ್ಲುವುದಿಲ್ಲ.
● ಸೊಪ್ಪುಗಳನ್ನು ಬೇಯಿಸುವಾಗ ಪಾತ್ರೆಯ ಮೇಲೆ ಮುಚ್ಚಳ ಮುಚ್ಚಿ ಇಡಬೇಡಿ, ಸೊಪ್ಪಿನ ಹಸಿರು ಬಣ್ಣ ಹಾಗೆಯೇ ಉಳಿದುಬಿಡುತ್ತದೆ.
● ಕಾಲಿ ಫ್ಲವರ್ ಗೆ ಸ್ವಲ್ಪ ವಿನೆಗರ್ ಬಳಸಿ ಬೇಯಿಸಿದರೆ ಅದರ ಬಿಳಿ ಬಣ್ಣ ಹಾಗೆಯೇ ಇರುತ್ತದೆ.
● ಮಸಾಲೆ ಅಥವಾ ಕೊಬ್ಬರಿಯನ್ನು ರುಬ್ಬುವಾಗ ಸ್ವಲ್ಪ ಉಪ್ಪು ಸೇರಿಸಿ ರುಬ್ಬಿದರೆ ಅದು ಬೇಗ ನುಣ್ಣಗಾಗುತ್ತದೆ ಮತ್ತು ಒರಳು ಕಲ್ಲಿನಲ್ಲಿ ಈ ರೀತಿ ರುಬ್ಬುವಾಗ ಉಪ್ಪು ಹಾಕಿದರೆ ಅದು ಸಿಡಿಯುವುದಿಲ್ಲ.
● ಪಲಾವ್ ಮಾಡುವ ಮೊದಲು ಬಾಸುಮತಿ ಅಕ್ಕಿಯನ್ನು ಮೊದಲು ಸ್ವಲ್ಪ ನೀರಿನಲ್ಲಿ ನೆನೆಸಿಟ್ಟು, ನೀರು ಬಸಿದು 3-4 ನಿಮಿಷಗಳ ಹಾಗೆಯೇ ಬಿಟ್ಟು ನಂತರ ಪಲಾವ್ ಮಾಡಿದರೆ ಅನ್ನ ಮುದ್ದೆ ರೀತಿ ಆಗದೆ ಉದುರು ಉದುರಾಗಿರುತ್ತದೆ.
● ದೋಸೆ ಅಕ್ಕಿ ಜೊತೆ ಸ್ವಲ್ಪ ಹೆಸರುಬೇಳೆ ಹಾಕಿ ರುಬ್ಬಿ ದೋಸೆ ಮಾಡಿದರೆ ದೋಸೆ ಮೃದುವಾಗಿರುತ್ತದೆ.
● ಬಾಳೆಕಾಯಿ ಹೆಚ್ಚುವಾಗ ಕೈಗಳಿಗೆ ಮಜ್ಜಿಗೆ ಸವರಿಕೊಂಡರೆ ಕೈಗಳು ಕಪ್ಪಾಗುವುದಿಲ್ಲ.
● ಗಾಳಿ ಬರುವ ಜಾಗದಲ್ಲಿ ಕುಳಿತುಕೊಂಡು ಈರುಳ್ಳಿ ಹಚ್ಚಿದರೆ ಕಣ್ಣೀರು ಬರುವುದಿಲ್ಲ
● ಕೈ ಸೀಮೆಎಣ್ಣೆ ಆಗಿ, ಅದೇ ವಾಸನೆ ಬರುತ್ತಿದ್ದರೆ ತಿಳಿ ಮಜ್ಜಿಗೆಯಿಂದ ಕೈಗಳನ್ನು ತೊಳೆಯಿರಿ. ಆಗ ಅದು ಸರಿ ಹೋಗುತ್ತದೆ.
● ಬೆಳ್ಳಿ ಪಾತ್ರೆಗಳನ್ನು ವಿಭೂತಿಯಿಂದ ಮತ್ತು ಸ್ಟೀಲ್ ಪಾತ್ರೆಗಳನ್ನು ಗೋಧಿ ಹಿಟ್ಟಿನಿಂದ ತಿಕ್ಕಿ ತೊಳೆದರೆ ಅವುಗಳಿಗೆ ಅಂಟಿರುವ ಕೊಳೆ ಹಾಗೂ ಜಿಡ್ಡು ಬೇಗ ಹೋಗುತ್ತದೆ ಮತ್ತು ಹೊಸದರಂತೆ ಬಹಳ ಫಳ
ಫಳ ಎಂದು ಹೊಳೆಯುತ್ತದೆ.
● ಕೈಗಳಿಗೆ ಕೊಬ್ಬರಿ ಎಣ್ಣೆ ಸವರಿಕೊಂಡು ಹಸಿಮೆಣಸಿನಕಾಯಿ ಹಚ್ಚಿದರೆ ಖಾರದಿಂದ ಕೈಗಳು ಉರಿಯುವುದಿಲ್ಲ.