ಮಸಾಲೆ ದೋಸೆ ಮಾಡುವಾಗ ಸ್ವಲ್ಪ ತೊಗರಿ ಬೇಳೆಯನ್ನು ನೆನಿಸಿ, ಸೇರಿಸಿ ರುಬ್ಬುವುದರಿಂದ ದೋಸೆಯ ಬಣ್ಣ ಚೆನ್ನಾಗಿರುತ್ತದೆ. ದೋಸೆ ಅಕ್ಕಿ ರುಬ್ಬುವಾಗ ಸ್ವಲ್ಪ ಹೆಸರುಬೇಳೆಯನ್ನು ಸೇರಿಸಿ ರುಬ್ಬುವುದರಿಂದ ದೋಸೆ ಮೃದುವಾಗಿ ಬರುತ್ತದೆ. ದೋಸೆ ಹಿಟ್ಟು ಹುಳಿಯಾಗಿದ್ದರೆ ಅದಕ್ಕೆ ಒಂದು ಲೀಟರ್ ಅಷ್ಟು ನೀರು ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ ಮೇಲಿನ ನೀರನ್ನು ಬಸಿದು ಕೆಳಗೆ ಉಳಿದಿರುವ ಹಿಟ್ಟನ್ನು ಉಪಯೋಗಿಸುವುದರಿಂದ ಹುಳಿ ಕಡಿಮೆ ಆಗುತ್ತದೆ.
ಮಸಾಲ ದೋಸೆ ಗರಿಗರಿಯಾಗಿ ಬರಬೇಕು ಎಂದರೆ ದೋಸೆ ಹಾಕುವಾಗ ಹಿಟ್ಟಿಗೆ ಅಕ್ಕಿ ಹಿಟ್ಟು ಮಿಕ್ಸ್ ಮಾಡಿ ಹಾಕಬೇಕು. ದೋಸೆಯ ಕಾವಲಿಯನ್ನು ಬಳಪದ ಕಲ್ಲಿನಿಂದ ಉಜ್ಜಿದರೆ ದೋಸೆಯು ಸ್ವಲ್ಪವೂ ಹರಿಯದೆ ಬರುತ್ತದೆ. ಈರುಳ್ಳಿಯನ್ನು ಅಡ್ಡಲಾಗಿ ಕತ್ತರಿಸಿ ಅದನ್ನು ಕಾವಲಿ ಮೇಲೆ ಉಜ್ಜಿ ದೋಸೆ ಹಾಕುವುದರಿಂದ ದೋಸೆ ಅಂಟಿಕೊಳ್ಳದೆ ಬರುತ್ತದೆ.
ದೋಸೆ ಮಾಡುವಾಗ ಉದ್ದಿನಬೇಳೆ ಬದಲು ಕಡ್ಲೆಪುರಿಯನ್ನು ಕೂಡ ಉಪಯೋಗಿಸಬಹುದು. ದೋಸೆ ಹಂಚಿಗೆ ಕಚ್ಚಿಕೊಳ್ಳುತ್ತಿದ್ದರೆ ವ್ಯಾಕ್ಸ್ ಪೇಪರ್ ಇಂದ ಉಜ್ಜಿದರೆ ಸರಿ ಹೋಗುತ್ತದೆ. ಗೋಧಿ ಹಿಟ್ಟು ಅಥವಾ ಮೈದಾ ಹಿಟ್ಟಿನ ಜೊತೆಗೆ ಸ್ವಲ್ಪ ಅಕ್ಕಿ ಹಿಟ್ಟು ಮಿಕ್ಸ್ ಮಾಡಿ ಗಟ್ಟಿಯಾಗಿ ಕಲಸಿ ಪೂರಿ ಮಾಡಿದರೆ ಅವು ದಪ್ಪವಾಗಿ ಉಬ್ಬಿ ಗರಿಗರಿಯಾಗಿ ಬರುತ್ತದೆ. ಪೂರಿ ಹಿಟ್ಟನ್ನು ಕಲಸುವಾಗ ಕಾಯಿಸಿದ ಎಣ್ಣೆಯನ್ನು ಹಾಕಿ ಕಲಸಿದರೆ ಪೂರಿ ಗರಿಗರಿಯಾಗಿ ಬರುವುದರ ಜೊತೆಗೆ ರುಚಿ ಹೆಚ್ಚಾಗುತ್ತದೆ.
ಪೂರಿ ರುಚಿಯಾಗಿರಬೇಕು ಮೃದುವಾಗಿ ಬರಬೇಕು ಎಂದರೆ ಮೈದಾಹಿಟ್ಟು ಕಲಸುವಾಗ ಮೊಸರನ್ನು ಸೇರಿಸಿ ಕಲಸಬೇಕು. ಚಪಾತಿ ಹಿಟ್ಟು ಕಲಸುವಾಗ ನೀರಿನ ಜೊತೆ ಹಾಲು ಹಾಕಿಕೊಂಡು ಕಲಸಿದರೆ ಚಪಾತಿ ಮೃದುವಾಗುತ್ತದೆ ಹಾಗೂ ಪುಷ್ಟಿ ಆಗುತ್ತದೆ. ಬೆಂದರೊಟ್ಟಿಗಳನ್ನು ಮೃದುವಾಗಿ ಇರಿಸಬೇಕು ಎಂದರೆ ಅವುಗಳನ್ನು ಹತ್ತಿ ಬಟ್ಟೆಯಲ್ಲಿ ಸುತ್ತಿ ಡಬ್ಬದಲ್ಲಿ ಇಡಬೇಕು.
ಅನ್ನ ಮಾಡುವಾಗ ಪಾತ್ರೆಯ ಒಳಗಿನ ಅಂಚಿನಿಂದ 3-4 ಅಂಗುಲ ಜಿಡ್ಡು ಸವರಿದರೆ ಅನ್ನ ಉಕ್ಕುವುದಿಲ್ಲ. ಅಕ್ಕಿ ಬೆಂದು ಅನ್ನ ಆಗುವಾಗ ಅಕ್ಕಿಯ ಮೂರರಷ್ಟು ಆಗುತ್ತದೆ ಹಾಗಾಗಿ ಅದನ್ನು ಗಮನದಲ್ಲಿಟ್ಟುಕೊಂಡು ಅನ್ನ ಮಾಡಲು ಪಾತ್ರೆ ಇಡಬೇಕು. ಅಲ್ಯುಮಿನಿಯಂ ಪಾತ್ರೆಯಲ್ಲಿ ಅನ್ನ ಮಾಡುವಾಗ ಒಂದೆರಡು ಹನಿ ವಿನೇಗರ್ ಹಾಕಿದರೆ ಪಾತ್ರೆ ಕಪ್ಪಾಗುವುದಿಲ್ಲ.
ಹೊಸ ಅಕ್ಕಿಯಲ್ಲಿ ಅನ್ನ ಮಾಡುವಾಗ ನೀರು ಕುದಿದ ಮೇಲೆ ಅಕ್ಕಿ ಹಾಕಿ ಒಂದೆರಡು ಕುದಿ ಬಂದ ಮೇಲೆ ಉರಿ ಕಡಿಮೆ ಮಾಡಿ ಪಾತ್ರೆಗೆ ಬಾಯಿಯನ್ನು ಮುಚ್ಚಿದರೆ ಅನ್ನ ಉದುರು ಉದುರಾಗಿ ಆಗುತ್ತದೆ. ಒಂದು ತುಂಡು ಬ್ರೆಡ್ ಪೀಸನ್ನು ಅನ್ನದ ಮೇಲೆ ಇಟ್ಟರೆ ತೇವಾಂಶವನ್ನು ಬ್ರೆಡ್ ಹೀರಿಕೊಳ್ಳುವುದರಿಂದ ಅನ್ನ ಉದುರು ಉದುರಾಗಿ ಆಗುತ್ತದೆ.
ಟೀ ಪುಡಿಯೊಂದಿಗೆ ಚಿಟಿಕೆ ಉಪ್ಪು ಚಿಟಿಕೆ ದಾಲ್ಚಿನ್ನಿ ಹಾಗೂ ಚಿಟಿಕೆ ಏಲಕ್ಕಿ ಸೇರಿಸಿ ಟೀ ಮಾಡಿದರೆ ಒಳ್ಳೆಯ ಸುವಾಸನೆ ಬರುತ್ತದೆ. ಟೀ ತಯಾರಿಸಿದ ಮೇಲೆ ಒಂದು ಲೋಟ ಟೀಗೆ ಒಂದು ಹನಿ ವಿನೆಗರ್ ಎಸೆನ್ಸ್ ಸೇರಿಸಿದರೆ ಒಳ್ಳೆಯ ರುಚಿ ಹಾಗೂ ಘಮ ಬರುತ್ತದೆ. ಕಾಫಿ ಮಾಡಿದ ಪಾತ್ರೆಯಲ್ಲಿ ಟೀ ಮಾಡಿದರೆ ಬಹಳ ರುಚಿ ಇರುತ್ತದೆ. ಒಂದು ಪಾತ್ರೆಯಲ್ಲಿ ತಣ್ಣೀರು ಹಾಗೂ ಟೀಸೊಪ್ಪು ಹಾಕಿ ಮುಚ್ಚಿ ಬಿಸಿಲಿನಲ್ಲಿ ಹಲವಾರು ಗಂಟೆಗಳ ಕಾಲ ಇಟ್ಟರೆ ಒಳ್ಳೆಯ ಐಸ್ ಟೀ ತಯಾರಾಗುತ್ತದೆ.
ಪ್ರೆಷರ್ ಕುಕ್ಕರ್ ನಲ್ಲಿ ಇಡ್ಲಿಗಳನ್ನು ಬೇಯಿಸುವಾಗ ಒಂದು ಬಟ್ಟಲನ್ನು ಬೋರಲು ಹಾಕುವುದರಿಂದ ಇಡ್ಲಿಗಳು ಮೆತ್ತೆಗೆ ಬರುತ್ತವೆ ಮತ್ತು ಇಡ್ಲಿ ಪಾತ್ರೆಯಲ್ಲಿ ಮಾಡಿದಂತೆ ಉಬ್ಬುತ್ತವೆ. ಇಡ್ಲಿಯನ್ನು ಅಡ್ಡವಾಗಿ ಕುಯ್ದು ಮಧ್ಯದಲ್ಲಿ ಚಟ್ನಿ ಚಟ್ನಿ ಪುಡಿ ಪಲ್ಯ ಜಾಮ್ ಅಥವಾ ಬೆಣ್ಣೆ ಇಟ್ಟು ಸ್ಯಾಂಡ್ ವಿಚ್ ತರಹ ಮಾಡಿ ಉಪಯೋಗಿಸಬಹುದು.