
ನಮ್ಮ ಹಿಂದೂ ಸಂಪ್ರದಾಯದಲ್ಲಿ ಪ್ರತಿ ಮನೆಗಳಲ್ಲೂ ಕೂಡ ಕಳಶ ಇಟ್ಟು ಪೂಜೆ ಮಾಡುತ್ತಾರೆ. ಕೆಲವರು ಲಕ್ಷ್ಮಿ ಕಳಶ ಇಡುತ್ತಾರೆ. ಕೆಲವರು ತಮ್ಮ ಮನೆಗಳಲ್ಲಿ ಮನೆ ದೇವರ ಹೆಸರು ಹೇಳಿ ಕಲಶ ಇಡುತ್ತಾರೆ. ಸರಿಯಾದ ವಿಧಾನದಲ್ಲಿ ಕಳಶದ ಪೂಜೆ ಮಾಡುವುದರಿಂದ ನಿಮ್ಮ ಮನೆ ಏಳಿಗೆ ಆಗುವಂತೆ ಮಾಡಬಹುದು.
ಲಕ್ಷ್ಮಿ ಸ್ವರೂಪವಾದ ಕಳಶವನ್ನು ಪೂಜೆ ಮಾಡಿ ಅಷ್ಟೈಶ್ವರ್ಯಗಳು ಮನೆಗೆ ಸಿದ್ಧಿಸುವ ರೀತಿ ಮಾಡಿಕೊಳ್ಳಬಹುದು. ದೇವರ ಮನೆಯಲ್ಲಿ ಇಡುವ ಕಳಸವು ದೇವರ ಕೋಣೆಗೆ ಒಂದು ಭೂಷಣ ಇದ್ದಂತೆ. ಅದನ್ನು ನೋಡಿದರೆ ಸಾಕ್ಷಾತ್ ಮಹಾಲಕ್ಷ್ಮಿ ಬಂದು ಕುಳಿತಿದ್ದಾಳೆ ಎನಿಸುತ್ತದೆ. ಈ ರೀತಿ ಅಲಂಕಾರ ಮಾಡಿ ಮಾತ್ರವಲ್ಲದೆ ವಿದಿವಿಧಾನಗಳಿಂದ ಅಷ್ಟೇ ಶುದ್ಧವಾಗಿ ಕಳಶ ಪ್ರತಿಷ್ಠಾಪನೆ ಮಾಡಿ ಪೂಜಿಸಿದರೆ ನಿಮ್ಮ ಬದುಕು ಬಂಗಾರ ಆಗುತ್ತದೆ.
ನೀವು ಶುಕ್ರವಾರದಂದು ಅಥವಾ ಅಮಾವಾಸ್ಯೆ ದಿನದಂದು ಕಳಶ ಪ್ರಸಿಷ್ಠಾಪನೆ ಮಾಡಿದರೆ ಒಳ್ಳೆಯದು. ಜೊತೆಗೆ ನಿಮ್ಮ ಮನೆಯಲ್ಲಿ ಹಿರಿಯರು ಯಾವ ರೀತಿ ಕಳಶ ಇಟ್ಟುಕೊಂಡು ಬಂದಿದ್ದರು ಅದೇ ರೀತಿಯಾಗಿ ಇಟ್ಟು, ಅವರು ಕಳಶ ಇಡುತ್ತಿದ್ದ ಚೊಂಬಿನಲ್ಲೇ ನೀವು ಕಲಶ ಇಟ್ಟು ಪೂಜೆ ಮಾಡಿದರೆ ಇನ್ನೂ ಒಳ್ಳೆಯದು. ಕಳಶವನ್ನು ಯಾವುದೇ ಕಾರಣಕ್ಕೂ ಸ್ಟೀಲ್ ಲೇಪನ ಇರುವ ಅಥವಾ ಸ್ಟೀಲ್ ಚೊಂಬಿನಲ್ಲಿ ಇಡಬಾರದು.
ಹಿತ್ತಾಳೆ, ತಾಮ್ರ ಅಥವಾ ಬೆಳ್ಳಿ ಹೀಗೆ ನಿಮ್ಮ ಶಕ್ತಿ ಅನುಸಾರವಾದ ಲೋಹದಲ್ಲಿ ಕಳಶ ಇಡಬೇಕು. ಮೊದಲು ದೇವರ ಕೋಣೆಯನ್ನು ಶುದ್ಧ ಮಾಡಿ ಕಳಶದ ಪಾತ್ರೆಗಳನ್ನು ತೊಳೆದು ಇಟ್ಟುಕೊಳ್ಳಬೇಕು. ಕಳಶವನ್ನು ನೆಲದ ಮೇಲೆ ಇಡಬಾರದು, ಒಂದು ಹಿತ್ತಾಳೆ ತಟ್ಟೆಗೆ 3 ಇಡಿ ಅಥವಾ 5 ಇಡಿ ಅಕ್ಕಿಯನ್ನು ಹಾಕಿ ಉಂಗುರದ ಬೆರಳಿನಿಂದ ಅದರೊಳಗೆ ಅಷ್ಟದಳದ ಕಮಲ ಬರೆದು ಅದರ ಮೇಲೆ ಕಳಶ ಇಡಬೇಕು.
ಕಳಶಕ್ಕೆ ಗಂಧ ಅರಿಶಿನ ಕುಂಕುಮ ಲೇಪನ ಮಾಡಿ ಅದಕ್ಕೆ ನೀರು ತುಂಬಿಸಿ ಅದಕ್ಕೆ ಒಂದು ನಾಣ್ಯ ಹಾಗೂ ಅರಿಶಿನ ಕುಂಕುಮ ಅಕ್ಷತೆ ಹಾಕಿ ಐದು ವೀಳ್ಯದೆಲೆ ಅಥವಾ ಮಾವಿನ ಎಲೆ ಇಟ್ಟು ತೆಂಗಿನಕಾಯಿಯನ್ನು ಇಡಬೇಕು. ತೆಂಗಿನಕಾಯಿ ತಾಗುವಂತೆ ನೀರು ತುಂಬಿಸಬೇಕು ಆದರೆ ನೀರು ತುಂಬಿ ಸುರಿಯಬಾರದು. ವೀಳ್ಯದೆಲೆ ಒಡೆದಿರಬಾರದು, ತುದಿ ಮುರಿದಿರಬಾರದು.
ತೆಂಗಿನಕಾಯಿಯಲ್ಲಿ ಕಣ್ಣು ಕಾಣುವಂತಿರಬಾರದು ಮತ್ತು ಜುಟ್ಟನ್ನು ನೀಟಾಗಿ ತೆಗೆದಿರಬೇಕು. ಲಕ್ಷ್ಮಿಗೆ ಕಲಶ ಇಡುವಾಗ ತಪ್ಪದೇ ಅದಕ್ಕೆ ಮಾಂಗಲ್ಯವನ್ನು ಹಾಕಬೇಕು ಅಥವಾ ಅರಿಶಿನದ ಕೊಂಬನ್ನು ಕೂಡ ಕಟ್ಟಬಹುದು. ಹೂವಿನಿಂದ ಕಳಶವನ್ನು ಅಲಂಕರಿಸಿ ಅಕ್ಕಪಕ್ಕ ದೀಪ ಇಟ್ಟು ಭಕ್ತಿಯಿಂದ ಕೈ ಮುಗಿಯಬೇಕು ಮತ್ತು ಕಲಶವನ್ನೇ ಲಕ್ಷ್ಮಿ ಸ್ವರೂಪ ಎಂದು ಭಾವಿಸಿ ಮನದ ಕೋರಿಕೆಯನ್ನೆಲ್ಲ ಕೇಳಬೇಕು. ಧೂಪ ದೀಪದಿಂದ ಆರತಿ ಮಾಡಿ ನೈವೇದ್ಯ ಕೂಡ ಅರ್ಪಿಸಬೇಕು.
ಬೆಳಗ್ಗೆ ಮತ್ತು ಸಂಜೆ ತಪ್ಪದೇ ದೀಪವನ್ನು ಕಳಶದ ಮುಂದೆ ಹಚ್ಚಿಡಬೇಕು. ಈ ರೀತಿ ಮಾಡುವುದರಿಂದ ನೂರಕ್ಕೆ ನೂರರಷ್ಟು ಶೀಘ್ರವಾಗಿ ನಿಮ್ಮ ಕೋರಿಕೆಗಳು ಈಡೇರುತ್ತವೆ. ಕಳಶವನ್ನು ಜರುಗಿಸುವಾಗ ಶುಕ್ರವಾರ, ಅಮವಾಸ್ಯೆ, ಹುಣ್ಣಿಮೆ ದಿನ ಜರುಗಿಸಬಾರದು. ಕಲಶದ ಜರುಗಿಸಿದ ಮೇಲೆ ಕಳಶದ ನೀರನ್ನು ಓಡಾಡುವ ಕಡೆ ಹಾಕಬಾರದು ಅದನ್ನು ಗಿಡಗಳ ಬುಡಕ್ಕೆ ಅಥವಾ ತುಳಸಿ ಗಿಡಕ್ಕೆ ಹಾಕಬೇಕು. ಈ ರೀತಿ ಪೂಜೆ ಮಾಡಿ ನೋಡಿ ನಿಮ್ಮ ಬದುಕು ಒಳ್ಳೆಯ ರೀತಿ ಬದಲಾಗಿ ಎಲ್ಲ ಸಮಸ್ಯೆಗಳು ಕೂಡ ಪರಿಹಾರ ಆಗುತ್ತದೆ.