ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ರಾಜ್ಯದ ಭೂಮಿರಹಿತ ಕೃಷಿ ಕಾರ್ಮಿಕರಿಗೆ ಸರ್ಕಾರದಿಂದ ಸಿಹಿ ಸುದ್ದಿ ಇದೆ. ಅದೇನೆಂದರೆ ಸರ್ಕಾರದಿಂದ ಅಕ್ರಮವಾಗಿ ಜಮೀನನ್ನು ಒತ್ತುವರಿ ಮಾಡಿಕೊಂಡು ಕಳೆದ 15 ವರ್ಷದಿಂದ ಉಳುಮೆ ಮಾಡುತ್ತಾ ಬಂದಿರುವ ರೈತನಿಗೆ ಅನುಕೂಲವಾಗುವಂತಹ ಆದೇಶವನ್ನು ಮಾನ್ಯ ಕಂದಾಯ ಸಚಿವರಾಗಿರುವ ಕೃಷ್ಣ ಬೈರೇಗೌಡರವರು ಹೊರಡಿಸಿದ್ದಾರೆ.
ರೈತರ ಬಹಳ ವರ್ಷಗಳಿಂದ ನಿರೀಕ್ಷೆ ವಿಚಾರವಾಗಿದ್ದ ಬಗರ್ ಹುಕುಂ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಮಾಡಲು ಸರ್ಕಾರ ಮುಂದಾಗಿರುವ ಮಾಹಿತಿಯನ್ನು ಸ್ವತಃ ಕಂದಾಯ ಸಚಿವರಾದ ಕೃಷ್ಣಭೈರೇಗೌಡರವರೇ ಕಳೆದ ವಾರ ನಡೆದ ಸುದ್ದಿಗೋಷ್ಠಿಯೊಂದರಲ್ಲಿ ಹಂಚಿಕೊಂಡಿದ್ದಾರೆ.
ಇದರಲ್ಲಿ ಬಹಳ ವಿಶೇಷವಾದ ವಿಷಯವಿದ್ದು ಈ ಬಾರಿ ಭೌತಿಕ ಹಕ್ಕುಪತ್ರ ವಿತರಣೆ ಬದಲು ಭೌತಿಕ ಹಕ್ಕುಪತ್ರಗಳ ದುರ್ಬಳಕೆಯನ್ನು ತಡೆಗಟ್ಟಿ ಸಂರಕ್ಷಿತವಾಗಿ ಇಡಲು ಬಗರ್ ಹುಕುಂ ಫಲಾನುಭವಿಗಳಿಗೆ ಡಿಜಿಟಲ್ ಸಾಗುವಳಿ ಹಕ್ಕು ಪತ್ರ ವಿತರಿಸಲು ಇಲಾಖೆ ನಿರ್ಧರಿಸುವ ಬಗ್ಗೆ ಕೂಡ ವಿಷಯ ಹಂಚಿಕೊಂಡಿದ್ದಾರೆ.
ನಮ್ಮ ದೇಶದಲ್ಲಿ ಕೃಷಿ ಚಟುವಟಿಕೆ ಮೇಲೆ ಅವಲಂಬಿತವಾಗಿ ಗ್ರಾಮೀಣ ಪ್ರದೇಶದ ಶೇಕಡವಾರು ಕುಟುಂಬಗಳು ಬದುಕುತ್ತಿವೆ. ಆದರೆ ಅನಾದಿಕಾಲದಿಂದಲೂ ಕೂಡ ಆಸ್ತಿ ಹಂಚಿಕೆ ವಿಚಾರದಲ್ಲಿ ವ್ಯತ್ಯಾಸಗಳು ಇರುವುದು ಮಾಮೂಲಿಯಾಗಿದೆ. ಕೆಲವರ ಬಳಿ ಅಪಾರ ಸಂಪತ್ತಿದ್ದರೆ ಇನ್ನು ಕೆಲವರು ಜಮೀನಿಲ್ಲದಿದ್ದರೂ ಕೃಷಿ ಚಟುವಟಿಕೆಯನ್ನು ಅವಲಂಬಿಸಿ ಕೃಷಿ ಕಾರ್ಮಿಕರಾಗಿರುತ್ತಾರೆ.
1980 ರಲ್ಲಿ ಆಗಿನ ಸರಕಾರ ಒಂದು ಮಹತ್ವದ ಹೆಜ್ಜೆ ಇಟ್ಟು ಜಮೀನು ಇಲ್ಲದ ಸಣ್ಣ ರೈತನಿಗೆ ಎರಡು ಎಕರೆ ಜಮೀನನ್ನು ಮಂಜೂರು ಮಾಡುವ ವ್ಯವಸ್ಥೆಯನ್ನು ಜಾರಿ ಮಾಡಿತ್ತು. ಆದರೆ ಈ ಒಂದು ಯೋಜನೆಯನ್ನು ಎಲ್ಲಾ ಭೂ ರಹಿತ ಎಲ್ಲಾ ರೈತರಿಗೆ ಯಶಸ್ವಿಯಾಗಿ ತಲುಪಿಸಲು ಸಾಧ್ಯವಾಗಲಿಲ್ಲ. ಆಗ ಬೇರೆ ಮಾರ್ಗ ಇಲ್ಲದೆ ಕೆಲವು ಭೂಮಿ ಸಿಗದ ಭೂ ರಹಿತ ಕೃಷಿಕರು ತಮಗೆ ಸಿಕ್ಕ ಜಾಗವನ್ನೇ ಆಕ್ರಮಿಸಿಕೊಂಡು ಉಳುಮೆ ಮಾಡಲು ಪ್ರಾರಂಭಿಸಿದರು.
ಉಳುಮೆ ಮಾಡಿ ಸಂಪಾದನೆ ಮಾಡಿದರೂ ಸರಕಾರದ ಸವಲತ್ತುಗಳು ಅಥವಾ ಇನ್ನಿತರೆ ಯೋಜನೆಗಳ ಪ್ರಯೋಜನ ಪಡೆಯಲು, ರೈತರ ಹೆಸರಿನಲ್ಲಿ ಜಮೀನಿನ ದಾಖಲೆಗಳು ಇರಬೇಕು. ಆದರೆ ಈ ರೀತಿ ಅಕ್ರಮವಾಗಿ ಸರ್ಕಾರದ ಜಮೀನನ್ನು ಒತ್ತುವರಿ ಮಾಡಿಕೊಂಡ ರೈತರಿಗೆ ಜಮೀನು ತಮ್ಮದೊಂದು ಹೇಳಿಕೊಳ್ಳಲು ದಾಖಲೆಗಳು ಇರದ ಕಾರಣ ಸರ್ಕಾರವು ಆ ಸಮಯದಲ್ಲಾದ ಅವ್ಯವಸ್ಥೆಯನ್ನು ಸರಿಪಡಿಸಲು ಈಗಲೂ ಪ್ರಯತ್ನಿಸುತ್ತಿದೆ.
ಈ ಹಿಂದೆಯೂ ಇಂತಹ ರೈತರಿಗೆ ಅವರು ಉಳುಮೆ ಮಾಡುತ್ತಿರುವ ಜಮೀನಿನ ಸಾಗುವಳಿ ಚೀಟಿ ಅಥವಾ ಹಕ್ಕು ಪತ್ರವನ್ನು ನೀಡುವುದಕ್ಕಾಗಿ 1991ರಲ್ಲಿ ರಾಜ್ಯ ಸರಕಾರದಿಂದ ಕರ್ನಾಟಕ ಭೂ ಕಂದಾಯ ಕಾಯಿದೆ 1991ರಲ್ಲಿ ನಮೂನೆ 50 ಹಾಗೆ 1999ರಲ್ಲಿ ನಮೂನೆ 53 ಮತ್ತು 2018 ರಲ್ಲಿ ನಮೂನೆ 57 ರ ಈ ಮೂರು ಕಾಯಿದೆಗಳ ಅಡಿಯಲ್ಲಿ ರೈತರಿಂದ ಅರ್ಜಿಗಳನ್ನು ಸ್ವೀಕರಿಸಲಾಗಿತ್ತು.
ಇನ್ನು ಸಹ ಇಂತಹ ಭೂಮಿಗಳನ್ನು ತಮ್ಮ ಹೆಸರಿಗೆ ಮಾಡಿಕೊಳ್ಳಲಾಗದ ರೈತರಿಗೆ ಈಗ ಅರ್ಜಿಗಳನ್ನು ಸಲ್ಲಿಸಿ ಹಕ್ಕು ಪತ್ರ ಪಡೆಯಲು ಸರ್ಕಾರ ಮತ್ತೊಂದು ಅವಕಾಶ ನೀಡುತ್ತಿದೆ. ಕಳೆದ 15 ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಭೂ ರಹಿತ ರೈತನಿಗಷ್ಟೇ ಈ ಅವಕಾಶವಿದ್ದು ಅರ್ಜಿ ಸಲ್ಲಿಸಿದವರ ಅರ್ಜಿಯನ್ನು ಭೌತಿಕವಾಗಿ ಪರಿಶೀಲಿಸಿ ಅದನ್ನು ವಿಲೇವಾರಿ ಮಾಡುವ ಕೆಲಸ ಕಂದಾಯ ಇಲಾಖೆ ಮಾಡುತ್ತದೆ.
ಈ ವಿಚಾರದಲ್ಲಿ ಕೂಡ ಸರ್ಕಾರಕ್ಕೆ ಮೋ’ಸವಾಗುತ್ತಿರುವುದನ್ನು ತಪ್ಪಿಸಲು ಈ ಬಾರಿ ಈ ಪ್ರಕ್ರಿಯೆಗೆ ಸಂಪೂರ್ಣ ತಂತ್ರಜ್ಞಾನ ಬಳಕೆ ಮಾಡಿ ಸಾಗುವಳಿ ಚೀಟಿ ನೀಡಲು ಸರ್ಕಾರ ಮುಂದಾಗಿದೆ. ತಾಲೂಕು ಮಟ್ಟದಲ್ಲಿ ಸಮಿತಿಗಳು ರಚನೆಯಾಗುತ್ತಿದ್ದು ಇನ್ನು ಆರು ತಿಂಗಳಲ್ಲಿ ಎಲ್ಲಾ ಅರ್ಜಿದಾರರಿಗೂ ಆಸ್ತಿಪತ್ರ ವಿತರಣೆ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ.