1. ರಸಂ ಪೌಡರ್
ಬೇಕಾಗುವ ಪದಾರ್ಥಗಳು:-
ಉದ್ದಿನ ಬೇಳೆ – 1 ಟೇಬಲ್ ಸ್ಪೂನ್
ತೊಗರಿ ಬೇಳೆ – 1 ಟೇಬಲ್ ಸ್ಪೂನ್
ಜೀರಿಗೆ – 3 ಟೇಬಲ್ ಸ್ಪೂನ್
ಧನಿಯಾ – 5 ಟೇಬಲ್ ಸ್ಪೂನ್
ಅರಿಶಿನ ಪುಡಿ – 1 ಟೀ ಸ್ಪೂನ್
ಮೆಂತ್ಯೆ – 1/4 ಟೀ ಸ್ಪೂನ್
ಕರಿಮೆಣಸು – 1/4 ಟೀ ಸ್ಪೂನ್
ಬ್ಯಾಡಗಿ ಮೆಣಸಿನಕಾಯಿ – 25
ಮಾಡುವ ವಿಧಾನ:-
ಮೊದಲಿಗೆ ಒಂದು ಬಾಣಲಿಗೆ ಅರ್ಧ ಟೀ ಸ್ಪೂನ್ ಎಣ್ಣೆಯನ್ನು ಹಾಕಿ ಉರಿ ಕಡಿಮೆ ಮಾಡಿ ತೊಗರಿ ಬೇಳೆ ಉದ್ದಿನ ಬೇಳೆ ಮೆಂತ್ಯೆ ಮತ್ತು ಕರಿಮೆಣಸು ಹಾಕಿ ಒಂದು ನಿಮಿಷ ಫ್ರೈ ಮಾಡಿ, ನಂತರ ಜೀರಿಗೆ ಧನಿಯಾ ಹಾಗೂ 1/2 ಚಮಚ ಇಂಗು ಸೇರಿಸಿ ಫ್ರೈ ಮಾಡುತ್ತಿರಿ. ಯಾವುದೇ ಪದಾರ್ಥಗಳು ಫ್ರೈ ಮಾಡುವಾಗ ಕಪ್ಪಾಗದಂತೆ ಫ್ರೈ ಮಾಡಬೇಕು, ನಂತರ ಇದಕ್ಕೆ 25 ಕರಿ ಬೇವಿನ ಎಲೆಗಳನ್ನು ಸೇರಿಸಿ ಒಂದು ನಿಮಿಷ ಫ್ರೈ ಮಾಡಿ ಒಂದು ತಟ್ಟೆಗೆ ಹಾಕಿ ಎಲ್ಲವನ್ನು ಆರಲು ಬಿಡಬೇಕು.
ಈ ಸುದ್ದಿ ಓದಿ:- ಯಾವ ರಾಶಿಯವರಿಗೆ ಯಾವ ಮೊಬೈಲ್ ಸಂಖ್ಯೆ ಅದೃಷ್ಟ……..||
ಈಗ ಅದೇ ಬಾಣಲೆಗೆ ಬ್ಯಾಡಗಿ ಮೆಣಸನ್ನು ಹಾಕಿ 3-4 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಫ್ರೈ ಮಾಡಬೇಕು ಮಸಾಲೆ ಜೊತೆ ಸೇರಿಸಿ ತಣ್ಣಗಾಗಲು ಬಿಡಿ. ನಂತರ ಇದೆಲ್ಲವನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ಅರಿಶಿಣ ಪುಡಿಯನ್ನು ಸೇರಿಸಿ ನುಣ್ಣಗೆ ಗ್ರೈಂಡ್ ಮಾಡಿದರೆ ರುಚಿಯಾದ ತಿಳಿ ಸಾರಿನ ಪುಡಿ ರೆಡಿ. ಖಾರ ಜಾಸ್ತಿ ಬೇಕು ಎನ್ನುವವರು ನಾಲ್ಕೈದು ಬ್ಯಾಡಗಿ ಮೆಣಸಿನಕಾಯಿ ಕಡಿಮೆ ಮಾಡಿ ಗುಂಟೂರು ಮೆಣಸಿನಕಾಯಿ ಸೇರಿಸಬಹುದು.
2. ಪುಳಿಯೋಗರೆ ಪೌಡರ್
ಬೇಕಾಗುವ ಪದಾರ್ಥಗಳು:-
ತೆಂಗಿನ ಎಣ್ಣೆ – 1 ಟೇಬಲ್ ಸ್ಪೂನ್
ಬ್ಯಾಡಗಿ ಮೆಣಸಿನಕಾಯಿ – 50 ಗ್ರಾಂ
ಗುಂಟೂರು ಮೆಣಸಿನಕಾಯಿ – 5
ಕರಿಬೇವಿನ ಎಲೆ – 30
ಇಂಗು – 1/2 ಟೀ ಸ್ಪೂನ್
ಮೆಂತ್ಯೆ – 1 ಟೀ ಸ್ಪೂನ್
ಸಾಸಿವೆ – 1 ಟೀ ಸ್ಪೂನ್
ಕರಿಮೆಣಸು – 1 ಟೇಬಲ್ ಸ್ಪೂನ್
ಕಪ್ಪು ಎಳ್ಳು – 50 ಗ್ರಾಂ
ಧನಿಯಾ – 50 ರಿಂದ 75 ಗ್ರಾಂ
ಜೀರಿಗೆ – 50 ಗ್ರಾಂ
ಕಡ್ಲೆಬೇಳೆ – 50 ಗ್ರಾಂ
ಉದ್ದಿನಬೇಳೆ – 50 ಗ್ರಾಂ
ಕೊಬ್ಬರಿ – 1/2
ಹುಣಸೆ ಹಣ್ಣು – 100ಗ್ರಾಂ
ಬೆಲ್ಲದ ಪುಡಿ – 4 ಟೇಬಲ್ ಸ್ಪೂನ್
ಉಪ್ಪು – 2 ಟೇಬಲ್ ಸ್ಪೂನ್
ಅಡುಗೆ ಎಣ್ಣೆ – 1/4 ಕಪ್
ಕಡ್ಲೇ ಬೀಜ – 4-5 ಟೇಬಲ್ ಸ್ಪೂನ್
ಬ್ಯಾಡಗಿ ಮೆಣಸಿನ ಪುಡಿ – 1 ಟೇಬಲ್ ಸ್ಪೂನ್
ಮಾಡುವ ವಿಧಾನ:-
ಮೊದಲಿಗೆ ಒಂದು ಚಮಚ ತೆಂಗಿನ ಎಣ್ಣೆ ತೆಗೆದುಕೊಂಡು ಬ್ಯಾಡಗಿ ಮೆಣಸಿನಕಾಯಿ ಹಾಗೂ ಗುಂಟೂರು ಮೆಣಸಿನಕಾಯಿಯನ್ನು ಕಡಿಮೆ ಉರಿಯಲ್ಲಿ ಫ್ರೈ ಮಾಡಿ, ಬಹಳ ಕಡಿಮೆ ಉರಿಯಲ್ಲಿ ಕೊನೆಯವರೆಗೂ ಕೂಡ ಎಲ್ಲಾ ಪದಾರ್ಥಗಳನ್ನು ಫ್ರೈ ಮಾಡಿದಾಗ ಮಾತ್ರ ರುಚಿ ಹಾಗೂ ಬಣ್ಣ ಸರಿಯಾಗಿ ಬರುತ್ತದೆ, ಬಹಳ ದಿನ ಇಟ್ಟುಕೊಂಡರೂ ಕೆಡುವುದಿಲ್ಲ.
ಐದಾರು ನಿಮಿಷ ಆದಮೇಲೆ ಕರಿಬೇವಿನ ಎಲೆ ಹಾಗೂ ಇಂಗನ್ನು ಕೂಡ ಸೇರಿಸಿ ಕರಿಬೇವಿನ ಎಲೆ ಗರಿಗರಿಯಾಗುವವರೆಗೂ ಫ್ರೈ ಮಾಡಿ ನಂತರ ಒಂದು ಬಟ್ಟಲಿಗೆ ಹಾಕಿ ಆರಲು ಬಿಡಿ. ಈಗ ಅದೇ ಬಾಣಲೆಗೆ ಮೆಂತ್ಯೆ, ಸಾಸಿವೆ, ಕರಿಮೆಣಸು ಹಾಕಿ ಕಡಿಮೆ ಉರಿಯಲ್ಲಿ 2-3 ನಿಮಿಷ ಫ್ರೈ ಮಾಡಿ ಅದೇ ಬಟ್ಟಲಿಗೆ ಹಾಕಿ.
ನಂತರ ಕಪ್ಪು ಎಳ್ಳನ್ನು ಕೂಡ ಚಿಟಪಟ ಸದ್ದು ಬರುವವರೆಗೆ 3-4 ನಿಮಿಷ ಫ್ರೈ ಮಾಡಿ ಆರಲು ಅದೇ ಬಟ್ಟಲಿಗೆ ಹಾಕಿ, ನಂತರ ಧನಿಯಾ, ಜೀರಿಗೆಯನ್ನು ಕೂಡ ಪ್ರತ್ಯೇಕವಾಗಿ ಇದೇ ರೀತಿ ಫ್ರೈ ಮಾಡಿ ಆರಲು ಇಡಿ, ಕಡಲೆ ಬೇಳೆ ಹಾಗೂ ಉದ್ದಿನಬೇಳೆಯನ್ನು ಬಣ್ಣ ಬದಲಾಗುವವರಿಗೆ 7-8 ನಿಮಿಷ ಫ್ರೈ ಮಾಡಿ ಪ್ರತ್ಯೇಕವಾದ ಬಟ್ಟಲಿನಲ್ಲಿ ಆರಲು ಇಡಿ.
ಈ ಸುದ್ದಿ ಓದಿ:-ತುಲಾ ರಾಶಿಯವರಿಗೆ ಮನೆ ಕಟ್ಟುವ ಯೋಗ ಪಲ ಜಾತಕದಲ್ಲಿ ಇದೆಯಾ.?
ಮತ್ತೆ ಬಾಣಲಿಗೆ ಅರ್ಧ ಚಮಚ ಎಣ್ಣೆ ಹಾಕಿಕೊಂಡು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿದ ಕೊಬ್ಬರಿಯನ್ನು ಹೊಂಬಣ್ಣ ಬರುವವರೆಗೂ ಫ್ರೈ ಮಾಡಿ ಪ್ರತ್ಯೇಕವಾಗಿ ಆರಲು ಇಡಿ. ನಂತರ ಹುಣಸೆಹಣ್ಣನ್ನು 10 ನಿಮಿಷ ಚೆನ್ನಾಗಿ ಫ್ರೈ ಮಾಡಿ ತಣ್ಣಗಾಗಲು ಬಿಡಿ. ಎಲ್ಲಾ ಪದಾರ್ಥಗಳನ್ನು ಕೂಡ ಆರಿದ ಮೇಲೆ ಪ್ರತ್ಯೇಕವಾಗಿ ಪುಡಿಗಳನ್ನಾಗಿ ಮಾಡಿಕೊಳ್ಳಿ.
ಹುಣಸೆ ಹಣ್ಣಿನ ಪುಡಿ ಮಾಡುವುದು ಸ್ವಲ್ಪ ಕಷ್ಟ ಆ ಸಮಯದಲ್ಲಿ ಉಳಿದ ಫೋಟೋಗಳನ್ನು ಸ್ವಲ್ಪ ಹಾಕಿ ಬೆಲ್ಲದ ಪುಡಿಯನ್ನು ಮತ್ತು 2 ಟೇಬಲ್ ಸ್ಪೂನ್ ಉಪ್ಪನ್ನು ಕೂಡ ಹಾಕಿ ನುಣ್ಣಗೆ ಗ್ರೈಂಡ್ ಮಾಡಿಕೊಳ್ಳಿ. ಕೊಬ್ಬರಿಯನ್ನು ಕೂಡ ಪುಡಿ ಮಾಡಿ ಸಪರೇಟ್ ಇಟ್ಟುಕೊಳ್ಳಿ ಉಳಿದ ಎಲ್ಲಾ ಪೌಡರ್ ಗಳನ್ನು ಚೆನ್ನಾಗಿ ಮಿಕ್ಸ್ ಮಾಡಿ. ಈಗ ಇದಕ್ಕೆ ಒಗ್ಗರಣೆಯನ್ನು ಕೊಡಬೇಕು.
1/4 ಕಪ್ ಎಣ್ಣೆ ಹಾಕಿ ನಿಮಗೆ ಬೇಕಾದಷ್ಟು ಕಡಲೆ ಬೇಳೆ, ಉದ್ದಿನ ಬೇಳೆ ಕಡಲೇಕಾಯಿ ಬೀಜ ಎಲ್ಲವನ್ನು ಕೂಡ ಹೊಂಬಣ್ಣಕ್ಕೆ ಫ್ರೈ ಮಾಡಿ, ತುಂಡು ಮಾಡಿದ ಮೂರು ಬ್ಯಾಡಗಿ ಮೆಣಸಿನಕಾಯಿ ಕರಿಬೇವಿನ ಎಲೆಗಳನ್ನು ಕೂಡ ಹಾಕಿ ಫ್ರೈ ಮಾಡಿ ಜೊತೆಗೆ ಒಂದು ಚಮಚ ಬ್ಯಾಡಗಿ ಮೆಣಸಿನಕಾಯಿ ಪುಡಿ ಹಾಕಿ ಫ್ರೈ ಮಾಡುತ್ತಾ ನಾವು ಮಾಡಿಕೊಂಡಿದ್ದ ಪುಡಿಯನ್ನು ಕೊನೆಯಲ್ಲಿ ಕೊಬ್ಬರಿ ಪುಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದರೆ ಪುಳಿಯೋಗರೆ ಪೌಡರ್ ರೆಡಿ.
3. ವಾಂಗಿಬಾತ್ ಪೌಡರ್
ಬೇಕಾಗುವ ಪದಾರ್ಥಗಳು:-
ಕಡಲೆಬೇಳೆ – 2 ಟೇಬಲ್ ಸ್ಪೂನ್
ಉದ್ದಿನಬೇಳೆ – 2 ಟೇಬಲ್ ಸ್ಪೂನ್
ಧನಿಯಾ – 75ಗ್ರಾಂ
ಗಸಗಸೆ – 1 ಟೇಬಲ್ ಸ್ಪೂನ್
ಕರಿಬೇವಿನ ಎಲೆ – 50
ಚಕ್ಕೆ – 3 ಪೀಸ್
ಏಲಕ್ಕಿ – 5
ಅನಾನಸ್ ಹೂ – 2
ಲವಂಗ – 10ಗ್ರಾಂ
ಅರಿಶಿಣ ಪುಡಿ – 1 ಟೇಬಲ್ ಸ್ಪೂನ್
ಕೊಬ್ಬರಿ ಎಣ್ಣೆ – 2 ಟೇಬಲ್ ಸ್ಪೂನ್
ಮೆಂತ್ಯೆ – 10 ಕಾಳು
ಬ್ಯಾಡಗಿ ಮೆಣಸಿನಕಾಯಿ – 100 ಗ್ರಾಂ
ಮಾಡುವ ವಿಧಾನ:-
ಮೊದಲಿಗೆ ಒಂದು ಬಾಣಲೆಯಲ್ಲಿ ಕೊಬ್ಬರಿ ಎಣ್ಣೆಯನ್ನು ಹಾಕಿ ಕಡಲೆಬೇಳೆ ಹಾಗೂ ಉದ್ದಿನಬೇಳೆ ಬಣ್ಣ ಬದಲಾಗುವವರೆಗೂ ಸಣ್ಣ ಉರಿಯಲ್ಲಿ ಫ್ರೈ ಮಾಡಿ ನಂತರ ತರ ಮಸಾಲಗಳನ್ನು ಹಾಕಿ ಘಮ ಬರುವವರೆಗೂ ಫ್ರೈ ಮಾಡಿ ನಂತರ ಧನಿಯಾ, ಗಸಗಸೆ, ಕರಿ ಬೇವಿನ ಎಲೆ ಇವುಗಳನ್ನು ಕೂಡ ಸೇರಿಸಿ ಕಡಿಮೆ ಉರಿಯಲ್ಲಿ ಹದವಾಗಿ ಫ್ರೈ ಮಾಡಿ ಆರಲು ಬಿಡಿ. ಈಗ ಅದೇ ಬಾಣಲಿಗೆ ಮೆಣಸಿನಕಾಯಿಯನ್ನು ಹಾಕಿ ಬಿಸಿ ಮಾಡಿಕೊಳ್ಳಬೇಕು. ಖಾರ ಬೇಕಾದರೆ ಗುಂಟೂರು ಮೆಣಸಿನಕಾಯಿಯನ್ನು ಕೂಡ ಸೇರಿಸಬಹುದು. ಇದೆಲ್ಲವೂ ಆರಿದ ಮೇಲೆ ಮಿಕ್ಸಿ ಜಾರಿಗೆ ಹಾಕಿ ಅರಿಶಿನ ಪುಡಿ ಕೂಡ ಸೇರಿಸಿ ನುಣ್ಣಗೆ ಪುಡಿ ಮಾಡಿದರೆ ವಾಂಗಿಬಾತ್ ಪೌಡರ್ ರೆಡಿ.
4. ಬಿಸಿಬೇಳೆ ಬಾತ್ ಪೌಡರ್
ಬೇಕಾಗುವ ಪದಾರ್ಥಗಳು:-
ಧನಿಯಾ – 5 ಟೇಬಲ್ ಸ್ಪೂನ್
ಉದ್ದಿನ ಬೇಳೆ / ಉದ್ದಿನ ಕಾಳು – 2 ಟೇಬಲ್ ಸ್ಪೂನ್
ಕಡ್ಲೆಬೇಳೆ – 2 ಟೇಬಲ್ ಸ್ಪೂನ್
ಅರಿಶಿಣ – 1/2 ಟೀ ಸ್ಪೂನ್
ಮೆಂತ್ಯೆ – 1/2 ಟೀ ಸ್ಪೂನ್
ಸಾಸಿವೆ – 1/2 ಟೀ ಸ್ಪೂನ್
ಗಸಗಸೆ – 1/2 ಟೀ ಸ್ಪೂನ್
ಇಂಗು – 1/4 ಟೀ ಸ್ಪೂನ್
ಚಕ್ಕೆ – 3 ಪೀಸ್
ಲವಂಗ – 12
ಏಲಕ್ಕಿ – 4
ಕರಿಬೇವು – 3 ಗರಿ
ಬ್ಯಾಡಗಿ ಮೆಣಸಿನಕಾಯಿ – 35
ಗುಂಟೂರು ಮೆಣಸಿನಕಾಯಿ – 5
ಮಾಡುವ ವಿಧಾನ:-
ಬಾಣಲೆಯನ್ನು ಬಿಸಿಯಾಗಲು ಇಟ್ಟು ಎಣ್ಣೆ ಹಾಕಿ ಮೊದಲಿಗೆ ಸಾಸಿವೆ ನಂತರ ಕಡಲೆ ಬೇಳೆ ಮತ್ತು ಉದ್ದಿನ ಬೇಳೆ ಸಣ್ಣ ಉರಿಯಲ್ಲಿ ಬಣ್ಣ ಬದಲಾಗುವವರೆಗೆ ಉರಿಯಿರಿ. ನಂತರ ಗರಂ ಮಸಾಲೆಗಳನ್ನು ಹಾಕಿ 1. ನಿಮಿಷ ಫ್ರೈ ಮಾಡಿ, ನಂತರ ಕರಿಬೇವಿನ ಎಲೆ ಮತ್ತು ಮೆಂತ್ಯೆ, ಧನಿಯಾ ಹಾಕಿ 3-4 ನಿಮಿಷ, ಕೊನೆಗೆ ಇಂಗು ಮತ್ತು ಗಸಗಸೆಯನ್ನು ಹಾಕಿ 1 ನಿಮಿಷ ಫ್ರೈ ಮಾಡಿ ಬೇರೆ ತಟ್ಟೆಗೆ ಹಾಕಿ ಆರಲು ಬಿಡಿ. ಈಗ ಅದೇ ಬಾಣಲೆಗೆ ಮೆಣಸಿನಕಾಯಿಯನ್ನು ಹಾಕಿ ಬಿಸಿ ಮಾಡಿ ಆರಲು ಬಿಟ್ಟು ಎಲ್ಲವೂ ತಣ್ಣಗಾದ ಮೇಲೆ ಮಿಕ್ಸಿ ಜಾರಿಗೆ ಎಲ್ಲವನ್ನು ಹಾಕಿ ಅರಿಶಿಣ ಸೇರಿಸಿ ಸ್ವಲ್ಪ ತರಿ ತರಿಯಾಗಿ ಪುಡಿ ಮಾಡಿದರೆ ಬಿಸಿಬೇಳೆ ಬಾತ್ ಪೌಡರ್ ರೆಡಿ.
ಸಾಂಬಾರ್ ಪೌಡರ್:-
ಬ್ಯಾಡಗಿ ಮೆಣಸಿನಕಾಯಿ – 90 ಗ್ರಾಂ
ಗುಂಟೂರು ಮೆಣಸಿನಕಾಯಿ – 10 ಗ್ರಾಂ
ಕರಿಬೇವಿನ ಎಲೆ – 3 ಗರಿ
ಧನಿಯಾ – 75ಗ್ರಾಂ
ಮೆಂತ್ಯೆ – 5ಗ್ರಾಂ
ಅಕ್ಕಿ – 1 1/2 ಟೇಬಲ್ ಸ್ಪೂನ್
ಕಡ್ಲೆಬೇಳೆ – 1 1/2 ಟೇಬಲ್ ಸ್ಪೂನ್
ತೊಗರಿ ಬೇಳೆ – 1 1/2 ಟೇಬಲ್ ಸ್ಪೂನ್
ಉದ್ದಿನಬೇಳೆ – 1 1/2 ಟೇಬಲ್ ಸ್ಪೂನ್
ಅರಿಶಿಣಪುಡಿ – 1 ಟೇಬಲ್ ಸ್ಪೂನ್
ಮೆಣಸು – 10ಗ್ರಾಂ
ಇಂಗು – 1/2 ಟೀ ಸ್ಪೂನ್
ಜೀರಿಗೆ – 2 1/2ಟೀ ಸ್ಪೂನ್
ಮಾಡುವ ವಿಧಾನ:-
ಒಂದು ಬಾಣಲಿಗೆ ಸ್ವಲ್ಪ ಎಣ್ಣೆ ಹಾಕಿ ಅದು ಬಿಸಿಯಾಗುತ್ತಿದ್ದಾಗ ಮೆಣಸಿನಕಾಯಿಗಳನ್ನು ಹಾಕಿ ಚೆನ್ನಾಗಿ 6-7 ಬಿಸಿ ಮಾಡಿ, ಕೊನೆಯಲ್ಲಿ ಕರಿಬೇವಿನ ಎಲೆ ಹಾಗೂ ಇಂಗನ್ನು ಹಾಕಿ ಫ್ರೈ ಮಾಡಿ ಒಂದು ತಟ್ಟೆಗೆ ಹಾಕಿ ಆರಲು ಬಿಡಿ. ನಂತರ ಅದೇ ಬಾಣಲೆಗೆ ಕಡಿಮೆ ಉರಿಯಲ್ಲಿ ಧನಿಯಾ ಹಾಕಿ ಹದವಾಗಿ ಫ್ರೈ ಮಾಡಿ ಅದೇ ತಟ್ಟೆಗೆ ಹಾಕಿ ಆರಲು ಬಿಡಿ.
ನಂತರ ಜೀರಿಗೆ ಬಿಟ್ಟು ಉಳಿದ ಎಲ್ಲಾ ಪದಾರ್ಥಗಳನ್ನು ಹಾಕಿ ಕಡಿಮೆ ಉರಿಯಲ್ಲಿ ಬಿಸಿ ಮಾಡಿಕೊಳ್ಳಬೇಕು, ಕೊನೆಯಲ್ಲಿ ಜೀರಿಗೆ ಕೂಡ ಹಾಕಿ ಅದು ಘಮ ಬಂದಮೇಲೆ ಸ್ಟವ್ ಆಫ್ ಮಾಡಿ ಎಲ್ಲವನ್ನು ಆರಲು ಬಿಟ್ಟು ಆರಿದ ಮೇಲೆ ನುಣ್ಣಗೆ ಗ್ರೈಂಡ್ ಮಾಡಿಕೊಂಡರೆ ರುಚಿಕರ ಸಾಂಬಾರ್ ಪೌಡರ್ ರೆಡಿ.