ಚಳಿಗಾಲ ಬಂತೆಂದರೆ ಚಳಿಗಾಲದಲ್ಲಿ ಸಾಮಾನ್ಯವಾಗಿ ಮೈಕೈ ನೋವು, ವೈರಲ್ ಫೀವರ್, ನೆಗಡಿ, ತಲೆನೋವು, ಕೆಮ್ಮು, ಕಫ ಗಂಟಲು ಕೆರೆತ, ಆಲಸ್ಯ, ತಲೆಭಾರ ಇವೆಲ್ಲವೂ ಕೂಡ ಸರ್ವೇ ಸಾಮಾನ್ಯವಾಗಿ ಬರುವ ಅರೋಗ್ಯ ಸಮಸ್ಯೆಗಳಾಗಿವೆ. ಜೊತೆಗೆ ಇವು ಒಬ್ಬರಿಂದ ಒಬ್ಬರಿಗೆ ಹರಡುತ್ತವೆ. ಹಾಗಾಗಿ ಈ ರೀತಿ ಚಳಿಗಾಲದಲ್ಲಿ ಹುಷಾರು ತಪ್ಪಿದ ತಕ್ಷಣವೇ ಅದು ಮತ್ತೊಬ್ಬರಿಗೆ ಹರಡದಂತೆ ಮೊದಲು ಎಚ್ಚರಿಕೆ ವಹಿಸಬೇಕು.
ಹಾಗೆಯೇ ಶೀಘ್ರವೇ ವೈದ್ಯರ ಬಳಿ ಹೋಗಿ ಸೂಕ್ತ ಚಿಕಿತ್ಸೆಯನ್ನು ಕೂಡ ಪಡೆದುಕೊಳ್ಳಬೇಕು. ಇದರೊಂದಿಗೆ ಕೆಲವು ಸಮಸ್ಯೆಗಳಿಗೆ ಮನೆಯಲ್ಲಿ ಮನೆಮದ್ದು ಕೂಡ ಮಾಡಿಕೊಳ್ಳಬಹುದು. ಒಟ್ಟಾರೆಯಾಗಿ ಅದು ಇನ್ನೊಬ್ಬರಿಗೆ ಹರಡುವ ಮುನ್ನ ಜಾಗೃತರಾಗಿ ಗುಣ ಮಾಡಿಕೊಳ್ಳಬೇಕಾದದ್ದು ಪ್ರತಿಯೊಬ್ಬರ ಜವಾಬ್ದಾರಿ ಅದಕ್ಕೆ ಅನುಕೂಲವಾಗಲು ಕೆಲವೊಂದು ಟಿಪ್ ಗಳನ್ನು ಈ ಅಂಕಣದಲ್ಲಿ ಕೊಡುತ್ತಿದ್ದೇವೆ.
* ಕೆಮ್ಮು ಹಾಗೂ ಸೀನುವಾಗ ತಪ್ಪದೇ ಕೈಅಡ್ಡ ಇಟ್ಟುಕೊಳ್ಳಬೇಕು, ಅಥವಾ ಕರವಸ್ತ್ರವನ್ನು ಅಡ್ಡ ಇಟ್ಟುಕೊಳ್ಳಬೇಕು.
* ತಲೆ ಸ್ನಾನ ಮಾಡುವಾಗ ಯಾವಾಗಲೂ ಬಿಸಿಲು ಬಂದಮೇಲೆ ಸ್ನಾನ ಮಾಡಬೇಕು ಹಾಗೂ ಬಿಸಿಲಿನಲ್ಲಿ 10 ರಿಂದ 20 ನಿಮಿಷಗಳ ಕಾಲ ಕೂದಲನ್ನು ಒಣಗಿಸಬೇಕು.
* ಪ್ರಯಾಣಿಸುವಾಗ ತಣ್ಣನೆಯ ಗಾಳಿ ಸೋಕಿದಾಗ ಕಿವಿಯಲ್ಲಿ ಇರಿತ ಆ ಮೂಲಕ ತಲೆನೋವು ಇತ್ಯಾದಿ ಶೀತಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಬರುತ್ತವೆ. ಹಾಗಾಗಿ ಎರಡು ಕಿವಿಗಳಿಗೆ ಹತ್ತಿ ಇಟ್ಟುಕೊಳ್ಳಬೇಕು ಸಾಧ್ಯವಾದರೆ ಸ್ಕಾರ್ಫ್ ಕೂಡ ಕಟ್ಟಿಕೊಂಡು ಬೆಚ್ಚಗಿರಬೇಕು.
* ಯಾರಾದರೂ ನಮ್ಮ ಎದುರು ಕೆಮ್ಮುತ್ತಿದ್ದರೆ ಅವರಿಂದ ದೂರ ಹೋಗುವುದು ಒಳ್ಳೆಯದು.
* ಬೇರೆ ಜಾಗಳಿಗಳಿಗೆ ಹೋದಾಗ ಬಿಸಿ ನೀರನ್ನು ಕುಡಿಯುವುದು ಒಳ್ಳೆಯದು, ಇಲ್ಲವಾದಲ್ಲಿ ನೀರಿನ ವ್ಯತ್ಯಾಸವಾದ ಕಾರಣ ತಲೆನೋವು ಆ ಮೂಲಕ ಜ್ವರ ಇತ್ಯಾದಿ ಸಮಸ್ಯೆಗಳು ಬರುತ್ತವೆ.
* ಈ ರೀತಿ ಶೀತಕ್ಕೆ ಸಂಬಂಧಿಸಿದ ಸಮಸ್ಯೆ ಇರುವವರು ಚಿಕ್ಕ ಮಕ್ಕಳನ್ನು ಮುಟ್ಟುವುದು, ಮುದ್ದು ಮಾಡುವುದು ಈ ರೀತಿಯೆಲ್ಲಾ ಮಾಡಬಾರದು, ಆದಷ್ಟು ತೊಂದರೆ ಇರುವವರು ತಮ್ಮ ಉಸಿರು ಮಗುವಿಗೆ ಸೋಕದಂತೆ ಎಚ್ಚರಿಕೆ ವಹಿಸಬೇಕು.
* ಐಸ್ ಕ್ರೀಮ್, ತಂಪು ಪಾನೀಯ ಇತ್ಯಾದಿ ತಣ್ಣಗಿರುವ ಆಹಾರ ಪದಾರ್ಥಗಳನ್ನು ಬಿಸಿಲು ಇರುವ ಮಧ್ಯಾಹ್ನದ ಸಮಯದಲ್ಲಿ ಮಾತ್ರ ಸೇವಿಸಬೇಕು. ವಾತಾವರಣ ತಂಪಾಗಿದ್ದಾಗ ಈ ರೀತಿ ತಂಡಿ ಪದಾರ್ಥಗಳ ಸೇವನೆ ಆರೋಗ್ಯಕ್ಕೆ ಮಾರಕ ಇದರಿಂದ ವಿನಾಕಾರಣ ಅನಾರೋಗ್ಯಕ್ಕೆ ತುತ್ತಾಗುತ್ತೇವೆ.
* ಗಂಟಲು ನೋವು, ಜ್ವರ, ತಲೆನೋವು, ಸುಸ್ತು ಇರುವವರು ಕಡ್ಡಾಯವಾಗಿ ಕಾಯಿಸಿದ ನೀರನ್ನೇ ಕುಡಿಯಬೇಕು.
* ಗಂಟಲು ನೋವು ಇರುವವರು ಆಗಾಗ ಉಪ್ಪು ನೀರಿನಿಂದ ಗಂಟಲಿಗೆ ಗಾರ್ಗಲಿಂಗ್ ಮಾಡಬೇಕು
* ಒಂದು ವೇಳೆ ಜ್ವರ ಬಂದಿದ್ದರೆ ಒಂದು ವಾರ ತಲೆ ಸ್ನಾನ ಮಾಡಬೇಡಿ.
* ಮಜ್ಜಿಗೆ ಮೊಸರು ತಂಪು ಪಾನೀಯ, ಕರಿದ ಪದಾರ್ಥಗಳು, ಇವುಗಳ ಸೇವನೆಯನ್ನು ಸ್ವಲ್ಪ ದಿನ ನಿಲ್ಲಿಸಿ
* ಸ್ವಲ್ಪ ಹಾಲಿಗೆ ಕಾಳು ಮೆಣಸಿನ ಪುಡಿ ಹಾಗೂ ಚಿಟಿಕೆ ಅರಿಶಿಣ ಹಾಕಿ ಪ್ರತಿದಿನ ರಾತ್ರಿ ಮಲಗುವಾಗ ಕುಡಿಯಿರಿ
* ಜೀರಿಗೆ ಕಾಳು, ಮೆಣಸಿನ ಕಾಳನ್ನು ಹಾಕಿ ಕಷಾಯ ಮಾಡಿಕೊಂಡು ಪ್ರತಿನಿತ್ಯವೂ ಸೇವಿಸಿ. ಇದರಿಂದ ಶೀತಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಕಡಿಮೆ ಆಗುತ್ತದೆ. ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ
* ಜ್ವರ ಬಂದಾಗ ಸುಸ್ತಾಗಿ ಊಟ ಮಾಡಲು ಆಗದೆ ಇದ್ದರೆ ಬಿಸಿನೀರಿಗೆ ಎರಡು ಚಮಚ ಸಕ್ಕರೆ ಅಥವಾ ಗ್ಲುಕೋಸ್, ಚಿಟಿಕೆ ಉಪ್ಪು ಹಾಕಿಕೊಂಡು ಆಗಾಕ ಕುಡಿಯುತ್ತಿರಿ
* ಬೀಡಿ, ಸಿಗರೇಟು ಸೇದುವ ಅಭ್ಯಾಸ ಇದ್ದರೆ ಬಿಟ್ಟು ಬಿಡಿ, ಸೇದುವವರಿಂದಲೂ ಕೂಡ ನೀವು ದೂರ ಇರಿ.
* ವೈರಸ್ ಫೀವರ್ ಆಗಿದ್ದರೆ ಆಂಟಿ ಬಯೋಟಿಕ್ ಐದು ದಿನ ಸೇವಿಸಲು ಹೇಳುತ್ತಾರೆ, ತಪ್ಪದೇ ಐದು ದಿನಗಳು ಸೇವಿಸಿ. 2-3 ದಿನದಲ್ಲಿ ಆರಾಮ್ ಎನಿಸಿದರು ಐದು ದಿನಗಳವರೆಗೆ ಸೇವಿಸಿ.