ಭೂಪಲ್ ಪಲ್ಲಿ ಜಿಲ್ಲೆಯ ಕಲೆಕ್ಟರ್ ಮೊಹಮದ್ ಅಬ್ದುಲ್ ಅಜೀಂ ಸರ್ಕಾರದ ಒಂದು ಕಾರ್ಯಕ್ರಮವನ್ನು ಮುಗಿಸಿಕೊಂಡು ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ತಮ್ಮ ಆಫೀಸಿಗೆ ಬಂದಿದ್ದಾರೆ. ಕಾರಿನಿಂದ ಇಳಿದು ಆಫೀಸಿಗೆ ನಡೆದುಕೊಂಡು ಹೋಗುತ್ತಿದ್ದಾಗ ಆಫೀಸಿನ ಮೆಟ್ಟಿಲುಗಳ ಮೇಲೆ ಒಬ್ಬರು ವಯಸ್ಸಾದ ಅಜ್ಜಿ ಕುಳಿತುಕೊಂಡಿರುವುದನ್ನು ನೋಡುತ್ತಾರೆ ಆ ಅಜ್ಜಿಯು ತನ್ನ ಸಮಸ್ಯೆಯನ್ನು ಕಲೆಕ್ಟರ್ ಗೆ ಹೇಳಿಕೊಳ್ಳಲು ಬಂದಿದ್ದರು ಕಲೆಕ್ಟರ್ ಅಜ್ಜಿಯನ್ನು ಗಮನಿಸಿದರು ಆದರೆ ಅಜ್ಜಿಗೆ ಇವರೇ ಕಲೆಕ್ಟರ್ ಎಂದು ಗೊತ್ತಿರಲಿಲ್ಲ.
ಆಫೀಸಿನ ಎಲ್ಲ ನೌಕರರು ಕಾರ್ಯಕ್ರಮಕ್ಕೆ ಹೋಗಿದ್ದರಿಂದ ಇಡೀ ಕಲೆಕ್ಟರ್ ಆಫೀಸ್ ಖಾಲಿ ಖಾಲಿ ಆಗಿರುತ್ತದೆ. ಕಲೆಕ್ಟರ್ ಅಜ್ಜಿಯ ಬಳಿ ಹೋಗಿ ನಿಮ್ಮ ಸಮಸ್ಯೆ ಏನು ಎಂದು ಕೇಳಿದಾಗ ನೀನು ಯಾರು ನಿನ್ನ ಹತ್ತಿರ ನನ್ನ ಸಮಸ್ಯೆ ಹೇಳಿಕೊಂಡರೆ ಬಗೆಹರಿಸುತ್ತೀಯಾ ಎಂದು ಕಲೆಕ್ಟರ್ ನ ಕೇಳುತ್ತಾರೆ. ಅಜ್ಜಿಯ ಆ ಮಾತಿನಲ್ಲಿ ಅವರಿಗೆ ಏನೋ ಸಮಸ್ಯೆ ಇದೆ ಎಂದು ಅರಿತ ಕಲೆಕ್ಟರ್ ಅಜ್ಜಿ ಒಳಗೆ ಬನ್ನಿ ಕುಳಿತು ಮಾತನಾಡೋಣ ಎಂದು ಕರೆಯುತ್ತಾರೆ.
ಆದರೆ ಮಗನೇ ನನಗೆ ಮಂಡಿ ನೋವು ಈ ಮೆಟ್ಟಿಲುಗಳನ್ನು ಹತ್ತಿ ಆಫೀಸಿನ ಒಳಗೆ ಬರಲು ಸಾಧ್ಯವಿಲ್ಲ ನನಗೆ ಆರು ತಿಂಗಳಿನಿಂದ ವೃದ್ದಾಪ್ಯ ವೇತನ ಪಾವತಿಸಿಲ್ಲ ಇಲ್ಲಿ ಇರುವ ಪ್ರತಿಯೊಬ್ಬರನ್ನು ಸಹ ಪ್ರತಿದಿನ ಕೇಳುತ್ತಿದ್ದೇನೆ ಆದರೆ ಇಂದು ನಾಳೆ ಎಂದು ಸತಾಯಿಸಿ ಆರು ತಿಂಗಳಾದರೂ ನನ್ನ ವೃದ್ದಾಪ್ಯ ವೇತನ ನೀಡುತ್ತಿಲ್ಲ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ಕಲೆಕ್ಟರ್ ಅಜ್ಜಿಯ ಕೈ ಹಿಡಿದು ನಿಮ್ಮ ಸಮಸ್ಯೆಯನ್ನು ನಾನು ಈಗಲೆ ಪರಿಹಾರ ಮಾಡುತ್ತೇನೆ, ನೀವು ಯಾವ ಊರಿನಿಂದ ಬಂದಿದ್ದೀರಿ? ನಿಮ್ಮ ಹೆಸರೇನು? ಎಂದು ಕೇಳಿದರು.
ನನ್ನ ಹೆಸರು ಅಜ್ಮೀರಾ ಮಂಗಮ್ಮ, ಈಗ ನನಗೆ 70 ವರ್ಷ ವಯಸ್ಸು ಕಳೆದ 2 ವರ್ಷಗಳಿಂದ ನನಗೆ ವೃದ್ದಾಪ್ಯ ವೇತನ ಬರುತ್ತಿಲ್ಲ. ಯಾಕೇ ಬರುತ್ತಿಲ್ಲ ಎಂದು ಕೇಳಿದರೆ ಮಂಡಲ ಪಂಚಾಯತಿಗೆ ಹೋಗಿ ವಿಚಾರಿಸಿ ಎಂದು ಪೋಸ್ಟ್ ಮ್ಯಾನ್ ಹೇಳಿದ ಅಲ್ಲಿ ಹೋಗಿ ಕೇಳಿದರೆ ನನ್ನ ಬಳಿ ಲಂಚ ಪಡೆದು ನಾಳೆ ನಾಳಿದ್ದು ಎಂದು ಹೇಳುತ್ತಾರೆ. ಅಲ್ಲಿಂದ ರಾಜಕರಣಿಗಳ ಬಳಿ ಹೋದರೆ ಬರಿ ಆಶ್ವಾಸನೆ ಕೊಡುತ್ತಾರೆ ಹೊರತು ನನಗೆ ಯಾರು ಹಣ ಕೊಡಿಸಲಿಲ್ಲ ಎಂದು ಅಜ್ಜಿ ಕಲೆಕ್ಟರ್ ಗೆ ವಿವರಿಸುತ್ತಾರೆ.
ಅದನ್ನು ಕೇಳಿದ ಕಲೆಕ್ಟರ್ ಅಜ್ಜಿ ನಿಮ್ಮ ಸಮಸ್ಯೆಯನ್ನು ನಾನು ಬಗೆಹರಿಸುತ್ತೇನೆ ಎಂದು ಅಜ್ಜಿಯ ಆಧಾರ್ ಕಾರ್ಡ್ ಪರಿಶೀಲಿಸಿ ನಂತರ DRDO ಸುಮತಿ ಅವರಿಗೆ ಕರೆ ಮಾಡಿ ಅಜ್ಜಿಯ ಸಮಸ್ಯೆಯ ಬಗ್ಗೆ ಚರ್ಚಿಸಿ ಕೂಡಲೇ ಅಜ್ಜಿಗೆ ವೃದ್ದಾಪ್ಯ ವೇತನ ಪಾವತಿಸಲು ಕಲೆಕ್ಟರ್ DRDO ಗೆ ಆದೇಶಿಸಿದ್ದಾರೆ. ಅದಕ್ಕೆ ಸುಮತಿ ಅವರು ಒಪ್ಪಿದ್ದಾರೆ. ನಂತರ ಕಲೆಕ್ಟರ್ ಅಜ್ಜಿಗೆ ನಾನು ಈ ಜಿಲ್ಲೆಯ ಕಲೆಕ್ಟರ್ ನಿಮ್ಮ ಹಣ ನಿಮಗೆ ಬಂದೇ ಬರುತ್ತದೆ ನೀವೇನು ಚಿಂತಿಸಬೇಡಿ ಎಂದು ಅಜ್ಜಿಯ ಪಕ್ಕ ಮೆಟ್ಟಿಲಿನ ಮೇಲೆ ಕುಳಿತು ಭರವಸೆ ನೀಡುತ್ತಾರೆ.
ಕಲೆಕ್ಟರ್ ನ ಮಾತುಗಳನ್ನು ಕೇಳಿ ಭಾವುಕರಾಗಿ ಅಜ್ಜಿಯು ಒಬ್ಬ ಕಲೆಕ್ಟರ್ ನನ್ನ ಪಕ್ಕ ಕುಳಿತು ಆತ್ಮೀಯವಾಗಿ ಮಾತನಾಡುತ್ತಿದ್ದರೆ ಎಂದು ಕಣ್ಣೀರು ಹಾಕುತ್ತಾ, ನೀನು ನೂರು ವರ್ಷ ಸುಖವಾಗಿ ಬಾಳು ಮಗು ನಿನಗೆ ಒಳ್ಳೆಯದಾಗಲಿ ಎಂದು ಆಶೀರ್ವಾದಿಸುತ್ತಾರೆ. ನಂತರ ಅಜ್ಜಿಯನ್ನು ನೀವು ಮನೆಗೆ ಹೋಗಿ ಅಧಿಕಾರಿಗಳು ನಿಮ್ಮ ಬಳಿಯೇ ಬರುತ್ತಾರೆ ಎಂದು ಹೇಳಿ ಕಲೆಕ್ಟರ್ ಆಫೀಸ್ ಒಳಗೆ ಹೋಗುತ್ತಾರೆ. ಇಂತಹ ಒಳ್ಳೆಯ ಕಲೆಕ್ಟರ್ ಪ್ರತಿ ಜಿಲ್ಲೆಯಲ್ಲಿಯೂ ಇದ್ದರೆ ಬಡವರಿಗೆ ಕಷ್ಟ ಇರುವುದಿಲ್ಲ ಎಂದು ಅಜ್ಜಿ ಹೇಳಿದ್ದಾರೆ.