ಕರ್ನಾಟಕದ ಜನತೆಯ ಹಸಿವು ನೀಗಿಸುವ ಆಹಾರ ಪೂರೈಕೆಯ ಪೂರಕವಾಗಿರುವುದು ಅನ್ನಭಾಗ್ಯ ಯೋಜನೆ. ಆದರೆ ಈ ಯೋಜನೆಯಲ್ಲಿ ಹಲವಾರು ಅಕ್ರಮಗಳು ನಡೆಯುತ್ತಿವೆ. ಕೆಲವರು ಈ ಯೋಜನೆಯ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಆದರೆ ಇದನ್ನು ಕಡಿವಾಣ ಗೊಳಿಸುವ ನಿಟ್ಟಿನಲ್ಲಿ ಸರ್ಕಾರವು ನಿರ್ಧರಿಸಿದ್ದು, ಪ್ರತಿಯೊಂದು ನ್ಯಾಯಬೆಲೆ ಅಂಗಡಿಗೆ STQC ಮಾನ್ಯತೆ ಪಡೆದ ಐರಿಸ್ ಸ್ಕ್ಯಾನರನ್ನು ಅಳವಡಿಸಲಿದೆ ಧ್ವನಿ ಮುದ್ರಿತ ತೂಕದ ಯಂತ್ರವನ್ನು ಸಹ ಅಳವಡಿಸುವಂತೆ ಆದೇಶ ಹೊರಡಿಸಿದೆ.
ನಮ್ಮ ಕರ್ನಾಟಕ ರಾಜ್ಯದಲ್ಲಿ 1,17,13,413 ಬಿಪಿಎಲ್ ಕಾರ್ಡ್ ಗಳು, 24,04,127 ಎಪಿಎಲ್ ಕಾರ್ಡ್ ಗಳು, 10,90,594 ಅಂತ್ಯೋದಯಗಳು ಸೇರಿದಂತೆ ಒಟ್ಟಾರೆಯಾಗಿ 1,52,08,134 ಕಾರ್ಡುಗಳಿವೆ ಪ್ರತಿ ತಿಂಗಳು 20,168 ನ್ಯಾಯಬೆಲೆ ಅಂಗಡಿಗಳಲ್ಲಿ ಆಹಾರ ವಸ್ತುಗಳನ್ನು ವಿತರಿಸಲಾಗುತ್ತದೆ. ನ್ಯಾಯಬೆಲೆ ಅಂಗಡಿಗಳಲ್ಲಿ ಬಿಪಿಎಲ್ ಅಥವಾ ಅಂತಿಯೋದಯ ಕಾರ್ಡ್ ಅನ್ನು ಹೊಂದಿದ ಕುಟುಂಬದ ಮುಖ್ಯ ಸದಸ್ಯನೊಬ್ಬನ ಬೆರಳಚ್ಚು ಬಯೋಮೆಟ್ರಿಕ್ ನಲ್ಲಿ ಪಡೆಯುವುದರ ಮುಖಾಂತರವಾಗಿ ಪಡಿತರವನ್ನು ನೀಡುತ್ತಾರೆ.
ಆದರೆ ಆಗಾಗ ಸರ್ವರ್ ಬ್ಯುಸಿ ಬರುವ ಕಾರಣವಾಗಿ ಜನರು ಬೇಸತ್ತು ಹೋಗಿದ್ದಾರೆ. ದಿನಗೂಲಿ ಮಾಡಿ ಬದುಕುವವರಿಗೆ ಒಂದು ಇಡೀ ದಿನ ನ್ಯಾಯಬೆಲೆ ಅಂಗಡಿಯ ಎದುರಲ್ಲಿ ಕಾಯುವುದು ಅಥವಾ ಸರ್ವರ್ ಬ್ಯುಸಿ ಎಂಬ ಕಾರಣಕ್ಕಾಗಿ ಪ್ರತಿದಿನವೂ ಕೆಲಸವನ್ನು ಬಿಟ್ಟು ಬಂದು ಕಾಯುವುದು ಕಷ್ಟಕರ. ಈ ಸಮಸ್ಯೆಯನ್ನು ಪರಿಹರಿಸುವುದಕ್ಕಾಗಿ ಓಟಿಪಿ ಮೂಲಕ ಪಡಿತರವನ್ನು ವಿತರಿಸುವ ಕಾರ್ಯವನ್ನು ನಿರ್ಮಿಸಲಾಗಿದೆ. ಇನ್ನು ಮುಂದೆ ಐರಿಸ್ ಸ್ಕ್ಯಾನರ್ ಮತ್ತು ಧ್ವನಿ ಮುದ್ರಿತ ತೂಕ ಯಂತ್ರಗಳ ಮೂಲಕವೇ ಪಡಿತರವನ್ನು ನೀಡಲಾಗುತ್ತದೆ.
‘ಈ ಹಿಂದೆ ಜಾರಿಯಲ್ಲಿದ್ದಂತೆ ಪಡಿತರವನ್ನು ಓಟಿಪಿ ಪಡೆಯುವುದರ ಮುಖಾಂತರವೇ ವಿತರಿಸುವುದು ಒಳಿತು. ಆದರೆ ಸರ್ವರ್ ಬ್ಯುಸಿ ಸಮಸ್ಯೆಯನ್ನು ಖಂಡಿತವಾಗಿ ಬಗೆಹರಿಸಬೇಕು. ಹೊರತಾಗಿ ರೂ.10,000 ಹಣವನ್ನು ಖರ್ಚು ಮಾಡಿ ಸ್ಕ್ಯಾನರ್ ಮತ್ತು ಮುದ್ರಿತ ತೂಕ ಯಂತ್ರಗಳ ಅಳವಡಿಕೆಯು ಅಷ್ಟು ಸರಿಯಲ್ಲ’. ಎಂದು ರಾಜ್ಯ ಪಡಿತರ ವಿತರಕರ ಸಂಘವು ಬಲವಾಗಿ ವಿರೋಧವನ್ನು ವ್ಯಕ್ತಪಡಿಸಿದೆ. ‘ಅಕ್ಕಿಯ ವಿತರಣೆಗಾಗಿ ಸರ್ಕಾರವು 120 ರೂಪಾಯಿಗಳ ಕಮಿಷನ್ ಅನ್ನು ನೀಡುತ್ತಿದೆ. ಆದರೆ ಉಳಿದ ರಾಜ್ಯಗಳಲ್ಲಿ ರೂಪಾಯಿ 250ರಷ್ಟು ಕಮಿಷನ್ ಅನ್ನು ನೀಡಲಾಗುತ್ತದೆ.
ಅಕ್ರಮ ದಂಧೆಯಲ್ಲಿ ಭಾಗಿಯಾದ ಆಹಾರ ಇಲಾಖೆಯ ಅಧಿಕಾರಿಗಳನ್ನು ಗುರುತಿಸಿ ನಿರ್ದಾಕ್ಷಿಣ್ಯವಾಗಿ ಅಗತ್ಯ ಕ್ರಮಗಳನ್ನು ಕೈಗೊಂಡರೆ ಯಾವುದೇ ಮೋಸವಾಗದೆ ಅಕ್ಕಿಯನ್ನು ವಿತರಿಸಲು ಸಾಧ್ಯವಾಗುತ್ತದೆ’. ಎಂದು ಸಂಘದ ಅಧ್ಯಕ್ಷ ಟಿ ಕೃಷ್ಣಪ್ಪ ಅವರು ಹೇಳಿಕೆಯನ್ನು ನೀಡಿದ್ದಾರೆ.
ಐರಿಸ್ ಸ್ಕ್ಯಾನರ್ ಎಂದರೇನು? ಇದು ಯಾವ ರೀತಿಯಲ್ಲಿ ಕೆಲಸ ಮಾಡುತ್ತದೆ? ಎಂದು ಯೋಚಿಸುತ್ತಿರುವವರಿಗೆ ಇಲ್ಲಿದೆ ಉತ್ತರ. ರಾಜ್ಯದ ಪ್ರತಿಯೊಂದು ನ್ಯಾಯಬೆಲೆ ಅಂಗಡಿಗಳಲ್ಲಿ ಈ ಐರಿಸ್ ಸ್ಕ್ಯಾನರ್ ಅನ್ನು ಅಳವಡಿಸಿಕೊಳ್ಳಬೇಕು. ಕಾರ್ಡುದಾರರ ಕಣ್ಣುಗಳನ್ನು ಸೆರೆಹಿಡಿದು ನಮೂದಿಸಿಕೊಳ್ಳುವಲ್ಲಿ ಇದು ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೆ ತೂಕದ ಪೆಟ್ಟಿಗೆಯಲ್ಲಿ ಧ್ವನಿಮುದ್ರಿತ ಸಾಧನವನ್ನು ಅಳವಡಿಸಿಕೊಳ್ಳಬೇಕು.
ಕಾರ್ಡನ್ನು ಹೊಂದಿದವರಿಗೆ 6 ಕೆ.ಜಿ ಅಕ್ಕಿಯನ್ನು ವಿತರಿಸಲಾಗುತ್ತಿತ್ತು. ಆದರೆ ಅಕ್ಕಿಯನ್ನು ನೀಡುವಾಗ ಕೆಲವು ಮಾಲೀಕರು 6 ಕೆಜಿಗಿಂತ ಕಡಿಮೆ ಪ್ರಮಾಣದ ಅಕ್ಕಿಯನ್ನು ತೂಕ ಮಾಡಿ ನೀಡಿ ಮೋಸ ಮಾಡುತ್ತಿದ್ದರು. ಆದರೆ ಐರಿಸ್ ಸ್ಕ್ಯಾನರ್ ಮತ್ತು ಧ್ವನಿಮುದ್ರಿತ ಯಂತ್ರವನ್ನು ಅಳವಡಿಸುವುದರ ಮೂಲಕ ನಮೂದಿಸಿದ ಕಾರ್ಡ್ ದಾರನಿಗೆ ಕಡಿಮೆ ಅಕ್ಕಿಯ ವಿತರಣೆಯಾದರೆ ಸೈರನ್ ಕೂಗಲಿದೆ. ಇದರಿಂದಾಗಿ ಅಕ್ಕಿಯ ತೂಕದಲ್ಲಿ ಮೋಸವಾಗಲು ಸಾಧ್ಯವಿಲ್ಲ. ಒಂದು ವೇಳೆ ಮೋಸವಾದರೆ ಅಪರಾಧಿಗಳನ್ನು ಹಿಡಿಯುವುದು ಸುಲಭದ ಕೆಲಸವಾಗಲಿದೆ.
ವಿತರಕರ ಸಂಘದ ಕೂಗನ್ನು ಕೇಳಿ ಸರ್ಕಾರವು ಸರ್ವರ್ ಸಮಸ್ಯೆಯನ್ನು ಕಡಿಮೆಗೊಳಿಸಿ ಓಟಿಪಿ ನೀಡುವುದರ ಮುಖೇನವೇ ಅಕ್ಕಿಯನ್ನು ವಿತರಣೆ ಮಾಡಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. ಆದರೆ ಈಗಾಗಲೇ ಐರಿಸ್ ಸ್ಕ್ಯಾನರ್ ಮತ್ತು ಧ್ವನಿ ಮುದ್ರಿತ ಯಂತ್ರಗಳನ್ನು ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಅಳವಡಿಸುವಂತೆ ಸರ್ಕಾರವು ಆದೇಶವನ್ನು ಹೊರಡಿಸಿದೆ.