ಎಲ್ಲರಿಗೂ ತಿಳಿದಿರುವಂತೆ ಭಾರತದಲ್ಲಿ ಜನಸಂಖ್ಯಾ ಸ್ಪೋಟ ತೀವ್ರವಾಗಿದೆ. ದಿನೇ ದಿನೇ ಹೆಚ್ಚುತ್ತಿರುವ ಜನಸಂಖ್ಯೆಗೆ ಆಹಾರದ ಕೊರತೆ ಉಂಟಾಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಸರ್ಕಾರಕ್ಕಿದೆ. ಆದರೆ ಕೃಷಿ ಒಂದೇ ಚಟುವಟಿಕೆಯಿಂದ ದೇಶದ ಎಲ್ಲರ ಹೊಟ್ಟೆಯನ್ನು ತುಂಬಿಸಲು ಸಾಧ್ಯವಾಗುವುದಿಲ್ಲ ಎನ್ನುವುದು ಕೂಡ ಎಲ್ಲರಿಗೂ ಗೊತ್ತಿರುವ ಸತ್ಯ. ಹಾಗಾಗಿ ಪ್ರಾಣಿಜನ್ಯ ಸಸಾರಜನಕ ಯುಕ್ತ ಆಹಾರದ ಮೊರೆ ಹೋಗಲೇಬೇಕು.
ಹೀಗಾಗಿ ಪಶುಸಂಗೋಪನೆ, ಮೀನು ಕೃಷಿ, ಜೇನು ಸಾಕಾಣಿಕೆ, ಕುರಿ ಕೋಳಿ ಸಾಕಾಣಿಕೆಗೆ ಸರ್ಕಾರಗಳು ಪ್ರೋತ್ಸಾಹ ನೀಡಿ ಹೆಚ್ಚಿನ ಸಹಾಯವನ್ನು ಮಾಡುತ್ತಿವೆ. ಅದರಲ್ಲೂ ಮೀನು ಕೃಷಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಮೀನು ಪಾಲನೆಯನ್ನು ಪ್ರೋತ್ಸಾಹಿಸಲಾಗುತ್ತಿದೆ. ಮತ್ಸ್ಯೋದ್ಯಮವನ್ನು ಉತ್ತೇಜಿಸುತ್ತಿರುವ ಸರ್ಕಾರವು ಮೀನು ಕೃಷಿ ಮಾಡಲು ಆಸಕ್ತಿ ತೋರುವಂತಹ ಯುವ ಜನತೆಗೆ ಉಚಿತ ತರಬೇತಿ ಮತ್ತು ಸ್ವಂತ ಉದ್ಯಮಿ ಆರಂಭಿಸುವವರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಇನ್ನು ಮುಂತಾದ ಅನುಕೂಲತೆಗಳನ್ನು ಮಾಡಿಕೊಡುತ್ತಿದೆ.
ಈ ಮೂಲಕ ದೇಶದ ನಿರುದ್ಯೋಗಿ ಯುವಕರನ್ನು ಮೀನು ಸಾಕಾಣಿಕೆಗೆ ಆಕರ್ಷಿಸುವುದು ಸರ್ಕಾರದ ಧ್ಯೇಯ. ಕರ್ನಾಟಕದಲ್ಲಿ ನಾಲ್ಕು ಕಡೆಗಳಲ್ಲಿ ಮೀನುಗಾರಿಕೆ ಇಲಾಖೆಯು ಉಚಿತ ಮೀನು ತರಬೇತಿ ಕೇಂದ್ರಗಳನ್ನು ತೆರೆದಿದೆ. ಪ್ರತಿ ಬ್ಯಾಚ್ ಅಲ್ಲೂ 25 ರಿಂದ 40 ಜನರಿಗೆ ಪ್ರತಿದಿನ 300ರೂ ಗಳಂತೆ ವೇತನ ಭತ್ಯೆ ಕೊಟ್ಟು ತರಬೇತಿ ನೀಡುತ್ತಿದೆ. ಕಡಿಮೆ ಸ್ಥಳ ಮತ್ತು ಕಡಿಮೆ ನೀರನ್ನು ಬಳಸಿಕೊಂಡು ಹೆಚ್ಚು ಇಳುವರಿ ಪಡೆಯುವಂತಹ ವಿಧಾನ ಅನುಸರಿಸಲು ತಂತ್ರಜ್ಞಾನಗಳ ಅವಶ್ಯಕತೆ ಇದೆ.
ಹಾಗಾಗಿ ತಂತ್ರಜ್ಞಾನ ಬಳಸಿಕೊಂಡು ಹೇಗೆ ಹೆಚ್ಚಿನ ಮೀನು ಇಳುವರಿ ಪಡೆದು ಲಾಭ ಗಳಿಸಬಹುದು ಎನ್ನುವ ಕಲೆಯನ್ನು ಮೀನುಗಾರಿಕೆ ತರಬೇತಿ ಕೇಂದ್ರಕ್ಕೆ ಸೇರುವ ಆಸಕ್ತ ಅಭ್ಯರ್ಥಿಗಳಿಗೆ ನುರಿತ ತರಬೇತುದಾರ ಕಡೆಯಿಂದ ಕೊಡಿಸಲಾಗುತ್ತದೆ. ಇಲ್ಲಿ ತರಬೇತಿ ಪಡೆದು ಪ್ರಮಾಣ ಪತ್ರ ಪಡೆದ ಮೇಲೆ ಆ ಪ್ರಮಾಣ ಪತ್ರ ಉಪಯೋಗಿಸಿಕೊಂಡು ಸರ್ಕಾರದಲ್ಲಿ ಸಿಗುವ ಸಬ್ಸಿಡಿ ಮತ್ತು ಕಡಿಮೆ ಬಡ್ಡಿ ಸಾಲ ಸೌಲಭ್ಯಗಳನ್ನು ಪಡೆದು ಸ್ವಂತ ಉದ್ಯಮೆ ಶುರು ಮಾಡಿ ಲಾಭ ಗಳಿಸಿ ಸ್ವಾವಲಂಬನೆಯಿಂದ ಜೀವನ ಕಟ್ಟುಕೊಳ್ಳಬಹುದು.
ಕರ್ನಾಟಕದ ನಾಲ್ಕು ಕೇಂದ್ರಗಳಿದ್ದು, ಹತ್ತಿರದಲ್ಲಿರುವ ಯಾವುದೇ ಕೇಂದ್ರಕ್ಕೆ ನೀವು ಅರ್ಜಿ ಸಲ್ಲಿಸಬಹುದು. ಒಂದು ವೇಳೆ ಒಂದು ಬ್ಯಾಚ್ ಪೂರ್ತಿಗೊಂಡರೆ ನಿಮ್ಮ ನೋಂದಣಿಯನ್ನು ಮುಂದಿನ ಬ್ಯಾಚ್ ಗೆ ಮಾಡಿಕೊಳ್ಳುತ್ತಾರೆ. ಈ ಅಂಕಣದಲ್ಲಿ ಮೀನು ಸಾಕಾಣಿಕೆ ಬಗ್ಗೆ ಆಸಕ್ತಿ ಹೊಂದಿರುವ ಯುವಕರಿಗೆ ಸಹಾಯ ಮಾಡುವ ಸಲುವಾಗಿ ಕರ್ನಾಟಕದಲ್ಲಿ ಮೀನುಗಾರಿಕೆ ಇಲಾಖೆ ಅಡಿಯಲ್ಲಿ ಬರುವ ಉಚಿತ ಮೀನು ಸಾಕಾಣಿಕೆ ತರಬೇತಿ ಕೇಂದ್ರಗಳ ವಿಳಾಸವನ್ನು ನೀಡಲಾಗಿದೆ.
● ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು ತರಬೇತಿ ಕೇಂದ್ರ,
ಬಿ ಆರ್ ಪ್ರಾಜೆಕ್ಟ್, ಭದ್ರಾವತಿ ತಾಲೂಕು,
ಶಿವಮೊಗ್ಗ ಜಿಲ್ಲೆ.
ದೂ.ಸಂಖ್ಯೆ: 08282 – 256252,
ಮೊ: 9945604264, 9448580818, 9449103663
● ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು ತರಬೇತಿ ಕೇಂದ್ರ,
ಕೆ ಆರ್ ಸಾಗರ, ಶ್ರೀರಂಗಪಟ್ಟಣ ತಾಲೂಕು,
ಮಂಡ್ಯ ಜಿಲ್ಲೆ.
ದೂ.ಸಂಖ್ಯೆ: 08236 – 567259
ಮೊ: 9535373793
● ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು ತರಬೇತಿ ಕೇಂದ್ರ,
ಕಬಿನಿ, ಎಚ್ ಡಿ ಕೋಟೆ ತಾಲೂಕು,
ಮೈಸೂರು ಜಿಲ್ಲೆ.
ದೂ.ಸಂಖ್ಯೆ: 08228 – 268310,
ಮೊ: 9986755434, 9731771235.
● ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು ತರಬೇತಿ ಕೇಂದ್ರ,
ಬೇತಮಂಗಲ ತಾಲೂಕು, ಕೋಲಾರ ಜಿಲ್ಲೆ.
ದೂ.ಸಂಖ್ಯೆ: 08153 – 277718,
ಮೊ: 9108651184, 9535022860.