ರಾಜ್ಯದಲ್ಲಿ ನಿರುದ್ಯೋಗ ದರದಲ್ಲಿ ಕಡಿಮೆ ಮಾಡಿ, ನಿರುದ್ಯೋಗಿ ಯುವಜನತೆಗೆ ಸ್ವಯಂ ಉದ್ಯೋಗ ಕಟ್ಟಿಕೊಳ್ಳಲು ನೆರವಾಗುವ ಉದ್ದೇಶದಿಂದ ಕರ್ನಾಟಕ ರಾಜ್ಯ ಸರ್ಕಾರದ ಸ್ವಾವಲಂಬಿ ಸಾರಥಿ ಯೋಜನೆಯನ್ನು ಘೋಷಿಸಿದೆ. ಕೆಲವು ದಿನಗಳ ಹಿಂದೆ ಸರ್ಕಾರವು ವಿವಿಧ ನಿಗಮಗಳಡಿ ಈ ಯೋಜನೆಯ ನೆರವು ನೀಡುವುದರ ಬಗ್ಗೆ ಘೋಷಿಸಿತ್ತು.
ಅಂತಿಮವಾಗಿ ಹೊಸ ವರ್ಷದಲ್ಲಿ ಫಲಾನುಭವಿಗಳಿಗೆ ಯೋಜನೆಯ ಅನುದಾನ ಬಿಡುಗಡೆ ಮಾಡುತ್ತಿದೆ. ಯೋಜನೆ ಕುರಿತಾದ ಮಾಹಿತಿಗಳಾದ ಅರ್ಜಿ ಸಲ್ಲಿಸಲು ಇರುವ ಮಾನದಂಡಗಳು, ಬೇಕಾಗುವ ದಾಖಲೆಗಳು ಹಾಗೂ ಅರ್ಜಿ ಸಲ್ಲಿಸುವ ವಿಧಾನ ಇನ್ನಿತರ ಪ್ರಮುಖ ಮಾಹಿತಿಗಳು ಹೀಗಿದೆ ನೋಡಿ…
ಯೋಜನೆ ಹೆಸರು:- ಸ್ವಾವಲಂಬಿ ಸಾರಥಿ ಯೋಜನೆ
ಯೋಜನೆಯ ಉದ್ದೇಶ:-
ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ, 2ಬಿ, 3ಬಿ ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ನಿರುದ್ಯೋಗಿ ಯುವಜನತೆಗೆ ವಾಣಿಜ್ಯದ ಉದ್ದೇಶಕ್ಕಾಗಿ ನಾಲ್ಕು ಚಕ್ರದ ವಾಹನಗಳಾದ ಟ್ಯಾಕ್ಸಿ ಆಟೋ ಸರಕು ವಾಹನ ಖರೀದಿಸಲು ಸಂಬಂಧಪಟ್ಟ ನಿಗಮದ ವತಿಯಿಂದ ಆರ್ಥಿಕ ನೆರವು ನೀಡುವುದು.
ಸಿಗುವ ಸಹಾಯಧನ:-
* ಸ್ವಾವಲಂಬಿ ಸಾರಥಿ ಯೋಜನೆಯಡಿ 4 ಚಕ್ರಗಳ ವಾಹನವನ್ನು ಖರೀದಿಸಲು ರಾಷ್ಟ್ರೀಕೃತ ಬ್ಯಾಂಕ್ ಅಥವಾ ಗ್ರಾಮೀಣ ಬ್ಯಾಂಕ್‌ಗಳು ಮಂಜೂರು ಮಾಡಿದ ಸಾಲಕ್ಕೆ 50%ರಷ್ಟು ಅಥವಾ ಗರಿಷ್ಠ ರೂ.3.00 ಲಕ್ಷಗಳವರೆಗೆ ಇವುಗಳಲ್ಲಿ ಯಾವುದು ಕಡಿಮೆಯೋ ಅಷ್ಟು ಸಹಾಯಧನವನ್ನು ನಿಗಮದಿಂದ ಮಂಜೂರು ಮಾಡಲಾಗುವುದು.
* ಬ್ಯಾಂಕ್ ಪಾಲಿನ ಸಾಲಕ್ಕೆ ಬ್ಯಾಂಕ್ ನಿಗಧಿಪಡಿಸುವ ಚಾಲ್ತಿ ದರದ ಬಡ್ಡಿಯೊಂದಿಗೆ ಸಾಲದ ಮೊತ್ತವನ್ನು ನಿಗದಿತ ಕಂತುಗಳಲ್ಲಿ ಫಲಾನುಭವಿಯು ಸಾಲ ಮರು ಪಾವತಿಸಬೇಕು.
ಅರ್ಹತಾ ಮಾನದಂಡಗಳು:-
* ಈ ಯೋಜನೆಯಲ್ಲಿ ಸೌಲಭ್ಯ ಪಡೆಯುವ ಅಭ್ಯರ್ಥಿಯು ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಅಲ್ಪಸಂಖ್ಯಾತ ವರ್ಗದ ಸಮುದಾಯಗಳಿಗೆ ಸೇರಿದವರಾಗಿರಬೇಕು.
* ಅರ್ಜಿದಾರರು ಲಘು ವಾಹನ ಚಾಲನಾ ಪರವಾನಗಿಯನ್ನು ಹೊಂದಿರಬೇಕು
* ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮೀಣ ಪ್ರದೇಶದವರಿಗೆ ರೂ.98000 ಮತ್ತು ನಗರ ಪ್ರದೇಶದವರಿಗೆ ರೂ. 120000 ಗಳನ್ನು ಮೀರಿರಬಾರದು.
* ಮುಖ್ಯವಾಗಿ ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.
* ಅರ್ಜಿದಾರರ ವಯಸ್ಸು ಕನಿಷ್ಠ 21 ವರ್ಷಗಳು ಹಾಗೂ ಗರಿಷ್ಠ 45 ವರ್ಷಗಳ ಮಿತಿಯೊಳಗಿರಬೇಕು.
* ಅರ್ಜಿದಾರರ ಕುಟುಂಬವು ಈ ಹಿಂದೆ ನಿಗಮದ ಯೋಜನೆಗಳಲ್ಲಿ ಅಥವಾ ಸರ್ಕಾರಿ ಇಲಾಖೆಗಳಲ್ಲಿ ಈ ಉದ್ದೇಶಕ್ಕೆ ಯಾವುದೇ ಯೋಜನೆಗಳಿಂದ ಸೌಲಭ್ಯ ಪಡೆದಿರಬಾರದು.
* ಈ ಯೋಜನೆಯಲ್ಲಿ ಸವಲತ್ತು ಪಡೆಯಬಯಸುವ ಅರ್ಜಿದಾರರು ವಾಸಿಸುತ್ತಿರುವ ವ್ಯಾಪ್ತಿಗೆ ಬರುವ ರಾಷ್ಟ್ರೀಕೃತ ಬ್ಯಾಂಕ್ ಶಾಖೆಯಲ್ಲಿ ಸರ್ಕಾರದ ಸೌಲಭ್ಯ ಪಡೆಯುವ ಆಧಾರ್ ಸಂಯೋಜಿತ ಬ್ಯಾಂಕ್ ಖಾತೆ ಹೊಂದಿರಬೇಕು.
* ಒಂದು ಕುಟುಂಬದಲ್ಲಿ ಒಬ್ಬರಿಗಷ್ಟೇ ಈ ಯೋಜನೆಯ ಪ್ರಯೋಜನ ಪಡೆಯಲು ಅವಕಾಶ
* ಮಹಿಳೆಯರಿಗೆ ಹಾಗೂ ಮಂಗಳಮುಖಿಯರಿಗೂ ಆದ್ಯತೆ ನೀಡಲಾಗುವುದು.
* ಈ ಯೋಜನೆಯ ಸೌಲಭ್ಯ ಪಡೆಯಲು ಬಯಸುವ ಫಲಾನುಭವಿಯು ಸ್ವಯಂ ಟ್ಯಾಕ್ಸಿ ಚಾಲನೆ (Yellow Board) ಉದ್ದೇಶಕ್ಕೆ ವಾಹನವನ್ನು ನೋಂದಾಯಿಸಬೇಕು.
ಬೇಕಾಗುವ ದಾಖಲೆಗಳು:-
* ಸಂಬಂಧಿಸಿದ ತಾಲ್ಲೂಕು ತಹಶೀಲ್ದಾರರು/ಕಂದಾಯ ಅಧಿಕಾರಿಗಳಿಂದ ನಿಗಧಿತ ನಮೂನೆಯಲ್ಲಿ ಪಡೆದ ಜಾತಿ/ಕುಟುಂಬದ ವಾರ್ಷಿಕ ಆದಾಯ ಪ್ರಮಾಣ ಪತ್ರ.
* ಅರ್ಜಿದಾರರ ವಾಸದ ಪುರಾವೆಗಾಗಿ ಸಕ್ಷಮ ಪ್ರಾಧಿಕಾರಗಳು ನೀಡಿದ ಆಧಾರ ಕಾರ್ಡ್/ಚುನಾವಣಾ ಗುರುತಿನ ಚೀಟಿ/ಪಡಿತರ ಚೀಟಿ.
* ಲಘು ವಾಹನ ಚಾಲನಾ ಪರವಾನಗಿಯ ದೃಢೀಕೃತ ಪ್ರತಿ.
* ಅರ್ಜಿದಾರರ ಪಾಸ್ ಪೋರ್ಟ್ ಅಳತೆಯ ಇತ್ತೀಚಿನ ಭಾವಚಿತ್ರ.
* ಅರ್ಜಿದಾರರು ನಿರುದ್ಯೋಗಿ ಆಗಿರಬೇಕು (ಸ್ವಯಂ ಘೋಷಣಾ ಪತ್ರ ಸಲ್ಲಿಸುವುದು).
* ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆ ವಿವರ
* ಮೊಬೈಲ್ ಸಂಖ್ಯೆ
ಅರ್ಜಿ ಸಲ್ಲಿಸುವ ವಿಧಾನ:-
* ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ
* ಈ ಮೇಲೆ ತಿಳಿಸಿದ ದಾಖಲೆಗಳೊಂದಿಗೆ ಹತ್ತಿರದ ಯಾವುದೇ ಗ್ರಾಮ ಒನ್, ಕರ್ನಾಟಕ ಒನ್, ಬಾಪೂಜಿ ಸೇವಾ ಕೇಂದ್ರ ಅಥವಾ ಬೆಂಗಳೂರು ಒನ್ ಅಥವಾ CSC ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು.