ಕೃಷಿ (Agriculture) ಜಮೀನಿನಲ್ಲಿ ಹನಿ ನೀರಾವರಿ (Drip irrigation) ಅಳವಡಿಸಿಕೊಳ್ಳುವುದರಿಂದ ರೈತನಿಗೆ ಸಾಕಷ್ಟು ಅನುಕೂಲವಾಗುತ್ತದೆ. ರೈತರು ಕಡಿಮೆ ನೀರಿನ ನಿರ್ವಹಣೆಯ ಮೂಲಕ ವ್ಯರ್ಥವಾಗಿ ನೀರು ಪೋಲಾಗುವುದನ್ನು ತಡೆಗಟ್ಟಬಹುದು ಹಾಗೂ ಸಮರ್ಥವಾದ ನೀರಿನ ಬಳಕೆಯಿಂದ ಉತ್ತಮ ಫಸಲನ್ನು ಪಡೆದು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು.
ಮಣ್ಣಿನ ಸವಕಳಿ ಕಡಿಮೆಯಾಗುವುದರಿಂದ ಮಣ್ಣಿನ ಆರೋಗ್ಯವು ಕೂಡ ಉತ್ತಮವಾಗುತ್ತದೆ. ಇದರಿಂದಲೂ ಕೂಡ ಪರೋಕ್ಷವಾಗಿ ರೈತನಿಗೆ ಅನುಕೂಲವೇ ಆಗುತ್ತದೆ. ಹಾಗೆಯೇ ರೈತನ ಆದಾಯ ಅಭಿವೃದ್ಧಿ ಜೊತೆಗೆ ಹೆಚ್ಚು ಬೆಳೆ ಉತ್ಪಾದನೆ ಆಗುವುದರಿಂದ ಆಹಾರ ಕೊರತೆ ತಪ್ಪುತ್ತದೆ. ಈ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಳ್ಳುವುದಕ್ಕೆ ಸರ್ಕಾರಗಳು (government) ಕೂಡ ಸಹಾಯ ಮಾಡುತ್ತಿವೆ.
ಕೇಂದ್ರ ಸರ್ಕಾರವು ಈ ರೀತಿ ನೀರಾವರಿ ಅಳವಡಿಸಿಕೊಳ್ಳುವ ರೈತನಿಗೆ ಹನಿ ನೀರಾವರಿ ಘಟಕ ನಿರ್ಮಾಣ ಮಾಡಿಕೊಳ್ಳುವುದಕ್ಕಾಗಿ ಸಹಾಯಧನವನ್ನು (Subsidy) ನೀಡುತ್ತಿದೆ. ರೈತರಿಗೆ ಕೇಂದ್ರ ಸರ್ಕಾರವು ನೀರಾವರಿಗೆ ಪ್ರೋತ್ಸಾಹ ನೀಡಲು ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ (PMKSY) ಮೂಲಕ ಹನಿ ನೀರಾವರಿ ಘಟಕ ನಿರ್ಮಾಣ ಮಾಡಿಕೊಳ್ಳುವುದಕ್ಕೆ ಸಹಾಯಧನ ನೀಡಲಾಗುತ್ತಿದೆ.
2015-16ನೇ ಸಾಲಿನಲ್ಲಿ ಕೇಂದ್ರ ಸರ್ಕಾರವು ಪರ್ ಡ್ರಾಪ್ ಮೋರ್ ಕ್ರಾಪ್ (Per Drop, More Crop) ಎನ್ನುವ ಧ್ಯೇಯದೊಂದಿಗೆ ಈ ಯೋಜನೆಯನ್ನು ಜಾರಿಗೆ ತಂದಿತು. ರೈತರು ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಹೆಚ್ಚಿನ ಆದಾಯ ಪಡೆಯಲು ಅನುಕೂಲವಾಗಲಿ ಎನ್ನುವ ಕಾರಣಕ್ಕಾಗಿ ಜಾರಿಗೆ ತಂದ ಹಲವು ಯೋಜನೆಗಳ ಪೈಕಿ ಇದು ಕೂಡ ಒಂದು.
ಇವುಗಳನ್ನು ಅಳವಡಿಸಿಕೊಳ್ಳುವ ರೈತರುಗಳಿಗೆ ಸರ್ಕಾರವು ಸಹಾಯಧನ ನೀಡುವ ಮೂಲಕ ರೈತರ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಈ ಪೈಕಿ ಕೃಷಿ ಕ್ಷೇತ್ರದಲ್ಲಿ ನೀರಾವರಿ ಸೌಲಭ್ಯ ಅಳವಡಿಸಿಕೊಳ್ಳುವ ರೈತರಿಗಾಗಿ ಪ್ರೋತ್ಸಾಹಿಸುವುದಕ್ಕಾಗಿಯೇ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಗೆ ಆರಂಭಿಸಲಾಗಿತು. ಪ್ರಸ್ತುತವಾಗಿ ಈಗ ರಾಜ್ಯದಲ್ಲಿ ಹನಿ ನೀರಾವರಿ ಅಳವಡಿಸಿಕೊಳ್ಳುವ ರೈತರಿಗೆ ಹನಿ ನೀರಾವರಿಗೆ ಅವಶ್ಯಕತೆ ಇರುವ ಪರಿಕರಗಳ ಖರೀದಿಗೆ 90%ರಷ್ಟು ಸಹಾಯಧನವನ್ನು ನೀಡುತ್ತಿದೆ.
ಇದಕ್ಕಾಗಿ ಅರ್ಜಿಗಳನ್ನು ಕೂಡ ಆಹ್ವಾನ ಮಾಡಿದೆ. ಈ ಯೋಜನೆಯ ಮೂಲಕ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ರೈತರಿಗೆ ಶೇಕಡ 90%ರಷ್ಟು ಸಹಾಯಧನ ಹಾಗೂ ಉಳಿದ ರೈತರಿಗೆ ಶೇಕಡ 75% ರಷ್ಟು ಸಹಾಯಧನವು ಸಿಗಲಿದೆ. ಕೊಳವೆಬಾವಿ ಮೂಲಕ ನೀರಾವರಿ ಅವಲಂಬಿಸಿರುವ ರೈತರುಗಳು ಈ ಪ್ರಯೋಜನವನ್ನು ಪಡೆಯಲು 1876ರೂ. ಪಾವತಿಸಿ ಸಂಬಂಧಪಟ್ಟ ಇಲಾಖೆಯಲ್ಲಿ ಅರ್ಜಿ ಸಲ್ಲಿಸಿದರೆ ಹನಿ ನೀರಾವರಿ ಪದ್ಧತಿಗೆ ಅನುಕೂಲವಾಗುವ 5 ಜೆಟ್, 5 ಸ್ಪ್ಲಿಂಕ್ಲರ್ ಹಾಗೂ 30 ಪೈಪ್ ಗಳನ್ನು ರಿಯಾಯಿತಿಯಲ್ಲಿ ಪಡೆಯಬಹುದು.
ರೈತರು ಈ ಯೋಜನೆಗೆ ಬೇಕಾಗುವ ದಾಖಲೆ ಜೊತೆಗೆ ಹತ್ತಿರದಲ್ಲಿರುವ ಜಿಲ್ಲಾ ಅಥವಾ ತಾಲೂಕು ಕೃಷಿ ಇಲಾಖೆ ಕಚೇರಿಗಳಲ್ಲಿ ಅಥವಾ ರೈತ ಸಂಪರ್ಕ ಕೇಂದ್ರಗಳಲ್ಲಿ ಇದರ ಪ್ರಯೋಜನವನ್ನು ಪಡೆಯಬಹುದು. ಆದರೆ ಒಬ್ಬ ರೈತ ಒಂದು ಬಾರಿ ಮಾತ್ರ ಈ ಯೋಜನೆಯ ಫಲಾನುಭವಿಯಾಗಲು ಅವಕಾಶ ಇರುವುದು. ಈ ಬಾರಿ ರಾಜ್ಯದ ಹಲವು ಜಿಲ್ಲೆಗಳ ಹಲವು ತಾಲೂಕುಗಳಲ್ಲಿ ಇದಕ್ಕೆ ಅವಕಾಶ ಮಾಡಿಕೊಳ್ಳಲಾಗಿದೆ. ರೈತರು ತಪ್ಪದೇ ಈ ಸದಾವಕಾಶವನ್ನು ಉಪಯೋಗಿಸಿಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ಇನ್ನಷ್ಟು ರೈತರ ಜೊತೆ ತಪ್ಪದೆ ಹಂಚಿಕೊಳ್ಳಿ.
ಯೋಜನೆಗೆ ಅರ್ಜಿ ಸಲ್ಲಿಸಿ ಸಹಾಯಧನ ಪಡೆಯಲು ಬೇಕಾಗುವ ದಾಖಲೆಗಳು:-
● ರೈತನ ಆಧಾರ್ ಕಾರ್ಡ್
● ಮೊಬೈಲ್ ಸಂಖ್ಯೆ
● ರೈತನು ಹೊಂದಿರುವ ಕೃಷಿ ಭೂಮಿಯ ದಾಖಲೆಗಳು (ಜಮೀನಿನ ಪಹಣಿ ಪತ್ರ).