
ಶುಕ್ರವಾರ ಹಿಂದೂಗಳ ಪಾಲಿಗೆ ಬಹಳ ವಿಶೇಷವಾದ ದಿನ. ಅದರಲ್ಲೂ ಕೂಡ ತಾಯಿ ಮಹಾಲಕ್ಷ್ಮಿ ಪೂಜೆಗೆ ಪ್ರಾಶಸ್ತ್ಯವಾದ ದಿನ. ಆ ದಿನ ಮನೆ ಮನೆಗಳಲ್ಲೂ ಕೂಡ ಮಹಾಲಕ್ಷ್ಮಿಯ ಆರಾಧನೆ ಮಾಡುತ್ತಾರೆ. ಭಕ್ತಿಯಿಂದ ತಾಯಿಯ ಆರಾಧನೆ ಮಾಡಿ ಮಹಾಲಕ್ಷ್ಮಿ ದೇವಿಯ ಕೃಪಕಟಾಕ್ಷಕ್ಕೆ ಒಳಗಾಗಲು ಕಟ್ಟುನಿಟ್ಟಾದ ಕ್ರಮಗಳನ್ನ ಅನುಸರಿಸುತ್ತಾರೆ.
ಈ ರೀತಿ ಶುಕ್ರವಾರದಂದು ಮಹಾಲಕ್ಷ್ಮಿ ಉಪಾಸನೆ ಮಾಡುವ ಕಾರಣ ಕೆಲ ತಪ್ಪುಗಳನ್ನು ಮಾಡಬಾರದು. ಶುಕ್ರವಾರದಂದು ಈ ರೀತಿ ತಪ್ಪುಗಳನ್ನು ಮಾಡುವುದರಿಂದ ಅನಿಷ್ಟ ಸುತ್ತುತ್ತದೆ, ದಟ್ಟ ದಾರಿದ್ರ್ಯಕ್ಕೆ ಒಳಗಾಗ ಬೇಕಾಗುತ್ತದೆ. ಹಾಗಾಗಿ ಇಂತಹ ವಿಷಯಗಳ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಂಡಿರಬೇಕು ಮತ್ತು ಈ ರೀತಿಯ ತಪ್ಪುಗಳನ್ನು ಮಾಡುತ್ತಿದ್ದರೆ ತಕ್ಷಣವೇ ಎಚ್ಚೆತ್ತುಕೊಂಡು ಸರಿಪಡಿಸಿಕೊಳ್ಳಬೇಕು.
● ಶುಕ್ರವಾರ ಮನೆಯಲ್ಲಿ ಉಪ್ಪು ಹಾಗೂ ಅರಿಶಿಣ ಖಾಲಿಯಾಯಿತು ಎಂದು ಹೇಳಬಾರದು. ಯಾವತ್ತೂ ಕೂಡ ಉಪ್ಪು ಹಾಗೂ ಅರಿಶಿಣ ಖಾಲಿ ಆಗುವವರೆಗೂ ಕೂಡ ಕಾಯಬಾರದು. ಆ ಡಬ್ಬಗಳು ಖಾಲಿ ಇರಬಾರದು, ಅದು ಇನ್ನೂ ಇದೆ ಎನ್ನುವಾಗಲೇ ಇವುಗಳನ್ನು ತಂದು ತುಂಬಿಸಿ ಇಟ್ಟುಕೊಳ್ಳಬೇಕು.
● ಪ್ರತಿಯೊಂದು ಮನೆಯಲ್ಲೂ ಕೂಡ ಅಕ್ಕಿ ಡಬ್ಬದ ಒಳಗೆ ಅಳತೆ ಮಾಡಲು ಒಂದು ಲೋಟವನ್ನು ಇಟ್ಟುಕೊಳ್ಳುತ್ತಾರೆ. ಈ ರೀತಿ ಲೋಟಗಳು ಯಾವಾಗಲೂ ನೇರವಾಗಿ ಇರಬೇಕು. ತಲೆಕೆಳಗಾದ ರೀತಿ ಅಕ್ಕಿ ಡಬ್ಬದ ಒಳಗಡೆ ಆಗಲಿ ಮೇಲೆ ಆಗಲಿ ಆ ಲೋಟವನ್ನು ಇಡಬಾರದು. ಅದರಲ್ಲೂ ಶುಕ್ರವಾರದಂದು ನೀವೇ ನಿಮ್ಮ ಕೈಯಾರೆ ಈ ರೀತಿ ಆ ಲೋಟವನ್ನು ಉಲ್ಟಾ ಮಾಡಿ ಇಡಬಾರದು ಈ ರೀತಿ ತಪ್ಪು ಮಾಡಿದರೂ ಕೂಡ ದರಿದ್ರ ಬರುತ್ತದೆ.
● ರಾತ್ರಿ ಹೊತ್ತು ಊಟ ಆದ ಬಳಿಕ ಎಲ್ಲಾ ಪಾತ್ರೆಗಳನ್ನು ತೊಳೆದಿಡುವುದು ಅಭ್ಯಾಸ. ಆದರೆ ನೆನಪಿರಲಿ ಮನೆಯಲ್ಲಿ ಆಹಾರ ಪದಾರ್ಥಗಳನ್ನು ಪೂರ್ತಿಯಾಗಿ ಖಾಲಿ ಮಾಡಿ ಇಡಬಾರದು. ಯಾವುದಾದರೂ ಚಿಕ್ಕ ಬಾಕ್ಸ್ ಅಲ್ಲಿ ಆದರೂ ಸ್ವಲ್ಪ ಅನ್ನ ಅಥವಾ ಇತರ ಯಾವುದೇ ಮಾಡಿರುವ ಆಹಾರ ಪದಾರ್ಥವನ್ನು ಎತ್ತಿ ಇಡಬೇಕು. ಹಿಂದಿನ ಕಾಲದಲ್ಲಿ ಈ ರೀತಿ ಪದ್ಧತಿ ಪಾಲಿಸುತ್ತಿದ್ದರು, ಯಾಕೆಂದರೆ ರಾತ್ರಿ ಹೊತ್ತು ಲಕ್ಷ್ಮಿ ದೇವಿ ಬಂದು ಅಡುಗೆ ಮನೆ ನೋಡುವುದರಿಂದ ಈ ರೀತಿ ಖಾಲಿ ಇದ್ದರೆ ಅವರು ಬೇಸರಿಸಿಕೊಂಡು ಶಪಿಸಿ ಹೋಗುತ್ತಾರೆ ಎನ್ನುವ ನಂಬಿಕೆ. ಹಾಗಾಗಿ ಅದರಲ್ಲೂ ಶುಕ್ರವಾರದಂದು ಅಡುಗೆ ಮನೆಯನ್ನು ಸ್ವಲ್ಪವೂ ಆಹಾರ ಇರದಂತೆ ಬಿಡಬಾರದು.
● ಹೆಣ್ಣು ಮಕ್ಕಳಾಗಲಿ ಗಂಡು ಮಕ್ಕಳಾಗಲಿ, ಚಿಕ್ಕವರಾಗಲಿ ದೊಡ್ಡವರಾಗಲಿ ಮನೆಯಿಂದ ಹೊರ ಹೋಗುವಾಗ ಖಾಲಿ ಹಣೆಯಲ್ಲಿ ಹೋಗಬಾರದು. ಅದರಲ್ಲೂ ಶುಕ್ರವಾರದಂದು ಈ ರೀತಿ ಮಾಡಲೇಬಾರದು. ಹಣೆಗೆ ಕುಂಕುಮ ಇಟ್ಟುಕೊಂಡು ಹೋಗುವುದರಿಂದ ಮಹಾಲಕ್ಷ್ಮಿ ಆಶಿರ್ವಾದ ಪ್ರಾಪ್ತಿಯಾಗುತ್ತದೆ, ನೀವು ಹೋದ ಕೆಲಸದಲ್ಲಿ ಜಯಗಳಿಸುತ್ತೀರಿ.
● ಶುಕ್ರವಾರದಂದು ಯಾವುದೇ ಕಾರಣಕ್ಕೂ ಉಗುರುಗಳನ್ನು ಕಟ್ ಮಾಡಬಾರದು. ಮುಂಜಾನೆ ಮಧ್ಯಾಹ್ನ ಸಂಜೆ ರಾತ್ರಿ ಯಾವ ಸಮಯದಲ್ಲೂ ಕೂಡ ಆ ದಿನ ಉಗುರುಗಳನ್ನು ಕಟ್ ಮಾಡಬಾರದು.ಬೇರೆ ದಿನ ಉಗುರು ಕಟ್ ಮಾಡಿದರೂ ಕೂಡ ಮನೆ ಒಳಗಡೆ ಕುಳಿತು ಉಗುರು ಕಟ್ ಮಾಡಬಾರದು.
● ಶುಕ್ರವಾರದಂದು ಮನೆಗಳಲ್ಲಿ ಬಟ್ಟೆಗಳನ್ನು ಒಗೆಯಬಾರದು, ಇದರಿಂದ ಆರ್ಥಿಕ ಸಮಸ್ಯೆ ಬರುತ್ತದೆ. ಜೊತೆಗೆ ಶುಕ್ರವಾರದಂದು ಸ್ನಾನ ಮಾಡಿದ ಮೇಲೆ ಮಡಿ ಬಟ್ಟೆಗಳನ್ನೇ ಧರಿಸಬೇಕು. ಧರಿಸಿದ್ದ ಬಟ್ಟೆಯನ್ನು ಮತ್ತೆ ಮತ್ತೆ ಧರಿಸುವುದರಿಂದ ದರಿದ್ರ ಬರುತ್ತದೆ, ಶುಕ್ರವಾರದಂದು ಗೃಹಿಣಿಯರು ಮುಂಜಾನೆ ಎದ್ದು ಸೂರ್ಯೋದಯದ ಆಗುವ ವೇಳೆಗೆ ಮನೆಯಲ್ಲಿ ದೀಪ ಹಚ್ಚಿ ಪೂಜೆ ಮಾಡಿರಬೇಕು.