ಕಳಸ ಎನ್ನುವುದು ತಾಯಿ ಮಹಾಲಕ್ಷ್ಮಿಯ ಸ್ವರೂಪ, ಕೆಲವರು ತಾಯಿ ಶ್ರೀ ಗೌರಿಯ ರೂಪವಾಗಿ ಕೂಡ ಕಳಶ ಇಟ್ಟು ಪೂಜೆ ಮಾಡುತ್ತಾರೆ. ಕಳಶ ಇಡುವಾಗ ಗೃಹಿಣಿಯರು ಬಹಳ ಎಚ್ಚರಿಕೆಯಿಂದ ಈ ಪೂಜಾ ವಿಧಾನವನ್ನು ಅನುಸರಿಸಬೇಕು ಇದರಿಂದ ಅವರಿಗೆ ಪೂಜೆಯ ಪೂರ್ತಿ ಪ್ರತಿಫಲ ಸಿಗುತ್ತದೆ ಮತ್ತು ಕಳಶ ಇಟ್ಟು ಪೂಜೆ ಮಾಡುವಾಗ ಕೆಲವು ನಿಯಮಗಳು ಇವೆ ಅವುಗಳನ್ನು ತಪ್ಪದೇ ಪಾಲಿಸಬೇಕು.
ಯಾವ ರೀತಿ ಕಳಶ ಇಡಬೇಕು ಮತ್ತು ಯಾವ ರೀತಿಯ ಪೂಜೆ ಮಾಡಿದರೆ ಫಲ ಎನ್ನುವುದರ ಬಗ್ಗೆ ಈ ಅಂಕಣದಲ್ಲಿ ಹಿರಿಯರು ಹೇಳಿರುವಂತಹ ಕೆಲವು ಕಿವಿಮಾತುಗಳ ಬಗ್ಗೆ ಹೇಳುತ್ತಿದ್ದೇವೆ. ನೀವು ಕೂಡ ಇದೇ ರೀತಿ ಪಾಲಿಸಿ, ಕಳಶ ಪೂಜೆಯ ಸಂಪೂರ್ಣ ಅನುಗ್ರಹ ಪಡೆಯಿರಿ.
* ಯಾವುದೇ ಕಾರಣಕ್ಕೂ ಕಳಸಕ್ಕೆ ಸ್ಟೀಲ್ ಅಥವಾ ಕೋಟಿಂಗ್ ಇರುವ ಚೊಂಬು ಇಡಬಾರದು, ಬೆಳ್ಳಿ ಅಥವಾ ಹಿತ್ತಾಳೆ ಚೆಂಬು ಇಡಬೇಕು. ಅದರಲ್ಲೂ ನಿಮ್ಮ ಹಿರಿಯರು ಮೊದಲಿನಿಂದಲೂ ದೇವರ ಕೋಣೆಯಲ್ಲಿ ಕಳಶ ಇಡಲು ಬಳಸುತ್ತಿದ್ದ ಚೊಂಬನ್ನೇ ಬಳಸಿದರೆ ಇನ್ನು ಉತ್ತಮ ಯಾಕೆಂದರೆ ಈಗಾಗಲೇ ಆ ವಸ್ತುಗಳಿಗೆ ದೈವಿಕ ಗುಣ ಬಂದಿರುತ್ತದೆ.
* ಕೆಲವರು ಮನೆದೇವರು ಕಳಶ, ಎಲೆ ಕಳಶ, ಕಾಯಿ ಕಳಶ ಹೀಗೆ ಅವರ ಪದ್ಧತಿ ಪ್ರಕಾರ ಇಡುತ್ತಾರೆ. ಒಂದು ವೇಳೆ ನೀವೇನಾದರೂ ತಾಯಿ ಮಹಾಲಕ್ಷ್ಮಿ ಅನುಗ್ರಹಕ್ಕಾಗಿ ಲಕ್ಷ್ಮಿ ಕಳಶ ಹೇಳುತ್ತಿದ್ದರೆ ಆ ಲಕ್ಷ್ಮಿ ಕಳಶಕ್ಕೆ ತಾಳಿಯನ್ನು ಹಾಕಬೇಕು ತಾಳಿ ಹಾಕಲು ಶಕ್ತಿ ಇಲ್ಲದಿದ್ದರೆ ಅರಿಶಿಣದ ಕೊಂಬನ್ನಾದರೂ ಅದಕ್ಕೆ ಕಟ್ಟಬಹುದು.
* ಕಳಶ ಇಡುವುದಕ್ಕೂ ಮುನ್ನ ಕಳಶ ಇಡುವ ಸಾಮಾಗ್ರಿಗಳನ್ನು ಶುದ್ಧವಾದ ನೀರಿನಿಂದ ತೊಳೆದು ಮಡಿ ಮಾಡಿದ ಮೇಲೆ ಇಡಬೇಕು. ನೆಲದ ಮೇಲೆ ಕಳಶವನ್ನು ಇಡಬಾರದು, ಒಂದು ತಟ್ಟೆಗೆ ಮೂರು ಹಿಡಿ ಅಥವಾ ಐದು ಹಿಡಿ ಅಕ್ಕಿಯನ್ನು ಹಾಕಿ ಅದಕ್ಕೆ ಅರಿಶಿನ ಕುಂಕುಮ ಅಕ್ಷತೆ ಹಾಕಿ ಉಂಗುರ ಬೆರಳಿನಿಂದ ಅಷ್ಟದಳ ಕಮಲ ಬಿಡಿಸಿ ಅದರ ಮೇಲೆ ನೀರು ತುಂಬಿದ ಚೊಂಬನ್ನು ಇಟ್ಟು ಕಳಶ ಮಾಡಬೇಕು
* ಕಳಸಕ್ಕೆ ತುಂಬವ ನೀರು ಕೂಡ ಮಡಿಯಾಗಿರಬೇಕು. ನೀರು ತುಂಬಿ ಅರಿಶಿನ ಕುಂಕುಮ ಗಂಧ ಅಕ್ಷತೆ ಹಾಕಿ, ನೀರಿಗೂ ಒಂದು ಹೂವು ಹಾಗೂ ಒಂದು ಹಿತ್ತಾಳೆ ಅಥವಾ ಬೆಳ್ಳಿಯ ನಾಣ್ಯವನ್ನು ಹಾಕಬೇಕು. ಕಳಸಕ್ಕೆ ಹಾಕುವ ನೀರು ತುಂಬಿರಬೇಕು ಆದರೆ ಕಾಯಿ ಇಟ್ಟಾಗ ಚೆಲ್ಲಬಾರದು, ಕಾಯಿಗೆ ತಾಗುವಷ್ಟು ನೀರು ಇರಬೇಕು. ಕೆಲವರು ಕಳಶದ ಒಳಗಡೆ ಕವಡೆ, ಗೋಮತಿ ಚಕ್ರ, ಕಮಲದ ಬೀಜಗಳನ್ನು ಹಾಕುತ್ತಾರೆ ಇದು ಕೂಡ ನಿತ್ಯ ಹಾಕಬೇಕೆಂಬ ನಿಯಮ ಇಲ್ಲ ಹಬ್ಬ ಹರಿದಿನಗಳಲ್ಲಿ ಹಾಕಿದರೆ ಸಾಕು.
* ಕಳಸಕ್ಕೆ ಇಡುವ ತೆಂಗಿನಕಾಯಿ ಬಗ್ಗೆಯೂ ಗಮನ ಕೊಡಬೇಕು. ಕಣ್ಣು ಕಾಣಿಸಬಾರದು, ಜುಟ್ಟು ಇರಬೇಕು, ಹಾಳಾಗಿರಬಾರದು ಇದಕ್ಕೆ ಮಡಿ ನೀರು ಚಿಮ್ಮಿಸಿ ಇಡಬೇಕು. ಕೆಲವರು ಕಾಯಿ ಪೂರ್ತಿ ಅರಿಶಿಣ ಹಚ್ಚಿ ಕುಂಕುಮ ಇಟ್ಟು ಇಡುತ್ತಾರೆ, ಹೀಗೂ ಮಾಡಬಹುದು.
* ಕಳಶಕ್ಕೆ ವಿಳ್ಯೆದೆಲೆ ಅಥವಾ ಮಾವಿನ ಎಲೆ ಇಡಬೇಕು. ಇವು ಒಡೆದಿರಬಾರದು, ಬಾಡಿರಬಾರದು ಒಂದೇ ಅಳತೆಯಲ್ಲಿ ಇರಬೇಕು ಮಡಿ ನೀರಿನಲ್ಲಿ ತೊಳೆದು ಇಡಬೇಕು.
* ಯಾವುದೇ ಕಾರಣಕ್ಕೂ ಮಂಗಳವಾರ, ಶುಕ್ರವಾರ, ಅಮಾವಾಸ್ಯೆ ಮತ್ತು ಹುಣ್ಣಿಮೆ ದಿನದಂದು ಕಳಶವನ್ನು ಕದಲಿಸಬಾರದು. ಇವುಗಳ ಹಿಂದಿನ ದಿನವೇ ಕದಲಿಸಿ ಎಲ್ಲವನ್ನು ಸ್ವಚ್ಛ ಮಾಡಿ ಇಟ್ಟುಕೊಂಡು ಈ ದಿನಗಳಲ್ಲಿ ಪ್ರತಿಷ್ಠಾಪನೆ ಮಾಡಿ ಪೂಜಿಸಿದರೆ ಶುಭ. ಕಳಸ ಪತಿಷ್ಠಾಪನೆ ಮಾಡಿದ ನಂತರ ಪದೇಪದೇ ಮುಟ್ಟುವುದು ಸರಿಪಡಿಸುವುದು ಈ ರೀತಿ ಮಾಡಬಾರದು
* ಕಳಶ ಕದಲಿಸಿದ ನಂತರ ಆ ನೀರನ್ನು ತುಳಸಿ ಗಿಡಕ್ಕೆ ಅಥವಾ ತೆಂಗಿನ ಮರಕ್ಕೆ ಹಾಕಬೇಕು. ಯಾರು ಆ ನೀರು ಎಲೆ ಹೂಗಳನ್ನು ತುಳಿಯಬಾರದು, ತೆಂಗಿನಕಾಯಿಯನ್ನು ತೆಗೆದು ಸಿಹಿ ಪದಾರ್ಥ ಮಾಡಿ ದೇವರಿಗೆ ನೈವೇದ್ಯ ಮಾಡಬಹುದು ಮತ್ತು ಮನೆ ಮಂದಿಯೆಲ್ಲಾ ಸೇವಿಸಬಹುದು. ಆದರೆ ಈ ತೆಂಗಿನಕಾಯಿಯಿಂದ ಖಾರದ ಪದಾರ್ಥಗಳನ್ನು ಮಾಡಬೇಡಿ.