
ಶಿವಣ್ಣ ಇಡೀ ಕರುನಾಡಿಗೆ ಅಣ್ಣನಾಗಿ ಇದ್ದಾರೆ. ಇನ್ನು ಅವರ ಕುಟುಂಬದ ರಾಜಕುಮಾರನಾಗಿದ್ದ ಅಪ್ಪು ಪಾಲಿಗಂತೂ ಅಣ್ಣನಿಗಿಂತ ಹೆಚ್ಚು, ಸ್ನೇಹಿತನಿಗಿಂತಲೂ ಹತ್ತಿರ. ತುಂಬು ಕುಟುಂಬವಾಗಿದ್ದ ದೊಡ್ಮನೆ ಎನ್ನುವ ಜೇನು ಗೂಡಿನಲ್ಲಿ ಎಂದು ಕೂಡ ಸಂತಸದ ಕಲರವವೇ ತುಂಬಿರುತ್ತಿತ್ತು. ಇದುವರೆಗೆ ಒಂದೇ ಒಂದು ಸಣ್ಣ ಊಹಾಪೋಹ ಅಥವಾ ಗಾಸಿಪ್ ಗೂ ಎಡೆ ಮಾಡಿಕೊಡದೆ ಎಲ್ಲಾ ಸಂಬಂಧಗಳು ಗಟ್ಟಿಯಾಗಿತ್ತು.
ಆದರೆ ವಿಧಿ ಕಲ್ಲು ಎಸೆದು ಅಪ್ಪು ಎನ್ನುವ ಅಮೂಲ್ಯ ರತ್ನವನ್ನು ಹೊತ್ತೊಯ್ದಿದೆ. ರಾಜ್ ಕುಟುಂಬದಲ್ಲಿ ಪ್ರತಿಯೊಬ್ಬರ ನಡುವೆಯು ಕೂಡ ಒಂದು ಭಾವನಾತ್ಮಕ ಸಂಬಂಧ ಬೆಸೆದುಕೊಂಡಿದೆ. ಅದರಲ್ಲೂ ಅಪ್ಪು ಅವರ ಜೊತೆ ಇಡೀ ಕುಟುಂಬಕ್ಕೆ ಇಂತಹದೊಂದು ಆತ್ಮೀಯತೆ ಇತ್ತು. ಶಿವಣ್ಣನ ಪಾಲಿಗಂತೂ ಈತ ತಮ್ಮ ಎನ್ನುವುದಕ್ಕಿಂತ ಸ್ವಂತ ಮಗನಿಗಿಂತ ಹೆಚ್ಚು. ಅದೇ ನೋವಿನಲ್ಲಿ ಇಂದು ಅಪ್ಪು ಇಲ್ಲದ ಹುಟ್ಟು ಹಬ್ಬದ ದಿನದಂದು ಅಪ್ಪು ಬಗ್ಗೆ ಭಾವುಕ ಪತ್ರ ಬರೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ ಶಿವಣ್ಣ.
AI ಪೇಂಟಿಂಗ್ ಅಲ್ಲಿ ತಮ್ಮನ ಜೊತೆಗಿರುವ ಫೋಟೋ ಪೇಂಟಿಂಗ್ ಜೊತೆಗೆ ಸಾಲು ಸಾಲು ಬರಹವನ್ನು ಅಪ್ಪು ಬಗ್ಗೆ ಬರೆದಿದ್ದಾರೆ ಶಿವಣ್ಣ. ಅಪ್ಪು ನೀನು ಹುಟ್ಟಿದಾಗ ನಮ್ಮ ಮನೆಯಲ್ಲಿ ಉಲ್ಲಾಸ ಉಕ್ಕಿ ಹರಿಯುತ್ತಿತ್ತು, ನಿನ್ನ ಕಣ್ಣಲ್ಲಿದ್ದ ಹೊಳಪು ನೀನು ಪವರ್ ಸ್ಟಾರ್ ಆಗುವುದನ್ನು ಆವಾಗಲೇ ಸಾರಿ ಹೇಳುತ್ತಿತ್ತು, ನೀನು ನಕ್ಕರೆ ಎಲ್ಲರೂ ನಗುತ್ತಾ ಇದ್ದರು, ನೀನು ಕುಣಿದರೆ ಎಲ್ಲರೂ ರೋಮಾಂಚನದಿಂದ ನೋಡುತ್ತಾ ಇದ್ದರು, ಮನೆಗೆ ಬಂದ ಅತಿಥಿ ನೆಂಟರುಗಳಿಗೆಲ್ಲ ನೀನೇ ಬೇಕು, ಆ ಪುಟ್ಟ ಅಪ್ಪು ಮಿಂಚಿನಂತೆ ತೆರೆಯ ಮೇಲೆ ಬಂದು, ಹೆಮ್ಮರವಾಗಿ, ಕೋಟ್ಯಂತರ ಜನರಿಗೆ ನೆರಳಾಗಿದ್ದನ್ನು ಹತ್ತಿರದಿಂದ ನೋಡಿದ ನಾನೇ ಪುನೀತ.
ನಿನ್ನನ್ನು ಎತ್ತಿ ಆಡಿಸಿದ ಅಣ್ಣನಾಗಿ, ನಿನ್ನ ಜೊತೆ ಕೂಡಿ ಆಡಿದ ಸ್ನೇಹಿತನಾಗಿ, ನಿನ್ನ ಕೆಲಸವನ್ನು ಮೆಚ್ಚಿ ಅಪ್ಪಿಕೊಂಡ ಕನ್ನಡಿಗನಾಗಿ, ಹಬ್ಬ ಯಾವುದೇ ಇದ್ದರೂ ನಿನ್ನ ಹೆಸರಿನಲ್ಲಿ ಪಟಾಕಿ ಹಚ್ಚುವ ನಿನ್ನ ಅಭಿಮಾನಿಗಳಲ್ಲಿ ಒಬ್ಬನಾಗಿ ಹೇಳುತ್ತಾ ಇದ್ದೀನಿ, ನೀನು ಹುಟ್ಟಿದ್ದೆ ಒಂದು ಉತ್ಸವ ನೀನು ಬೆಳೆದದ್ದು ಇತಿಹಾಸ, ನಿನ್ನ ಜೀವನ ಒಂದು ದಂತಕಥೆ, ನಿನ್ನ ನೆನಪುಗಳು ಎಂದಿಗೂ ಅಮರ ಹುಟ್ಟುಹಬ್ಬದ ಶುಭಾಶಯಗಳು ಅಪ್ಪು ಎಂದು ಪ್ರೀತಿಯ ತಮ್ಮನನ್ನು ನೆನೆದು ಬರೆದುಕೊಂಡಿದ್ದಾರೆ.
ಈ ಪೋಸ್ಟ್ ನೋಡಿದ ಕೂಡಲೇ ಅಣ್ಣನ ಮನದಲ್ಲಿರುವ ನೋವಿನ ಭಾರವನ್ನು ನೆನೆದು ಎಲ್ಲರ ಕಣ್ಣಾಲಿಗಳು ಕೂಡ ತೇವ ಆಗದೆ ಇರಲಾರದು. ಇಡೀ ಕರುನಾಡು ಇಂದಿಗೂ ಅಪ್ಪು ಹೆಸರು ಕೇಳಿದಾಗಲೆಲ್ಲ ಆ ಆರದ ಗಾಯದ ನೋವನ್ನು ಅನುಭವಿಸುತ್ತಿರುವಾಗ , ಅವರ ಜೀವನದ ಭಾಗವೇ ಆಗಿದ್ದ ತಮ್ಮನನ್ನು ಕಳೆದುಕೊಂಡ ಶಿವಣ್ಣನ ದುಃಖವನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ.
ರಾಘಣ್ಣ ಕೂಡ ಮಧ್ಯರಾತ್ರಿಯೇ ಅಪ್ಪು ಪುಣ್ಯ ಸ್ಮಾರಕದ ಬಳಿ ಹೋಗಿ ಅಪ್ಪು ಅಭಿಮಾನಿಗಳು ಅಪ್ಪುಗಾಗಿ ರೆಡಿ ಮಾಡಿದ್ದ ಹುಟ್ಟು ಹಬ್ಬದ ಆಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ರಾಘಣ್ಣನ ಜೊತೆ ರಾಘಣ್ಣ ಇಡೀ ಕುಟುಂಬ ಅಪ್ಪು ಎರಡನೇ ಮಗಳು ವಂದಿತಾ ಮತ್ತು ಕುಟುಂಬದ ಇತರರು ಕೂಡ ಅಭಿಮಾನಿಗಳ ನಡುವೆ ಅಭಿಮಾನದಿಂದ ಅಪ್ಪುಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ಹೇಳಿದ್ದಾರೆ. ಕರುನಾಡು ಕಂಡ ಈ ಶ್ರೇಷ್ಠ ಪುರುಷನಿಗೆ ನಾವು ಸಹ ಮತ್ತೊಮ್ಮೆ ಹುಟ್ಟು ಹಬ್ಬವನ್ನು ಹೇಳಿ ತಾಯಿ ಭುವನೇಶ್ವರಿ ಮಡಿಲಲ್ಲೇ ಮತ್ತೆ ಪುನೀತ್ ಹುಟ್ಟಿ ಬರುವಂತಾಗಲಿ ಎಂದು ಬಯಸೋಣ.